ಸಾರಾಂಶ
ಶಿವಮೊಗ್ಗ : ತುಂಗಾಭದ್ರಾ ಜಲಾಶಯದಲ್ಲಿ ನಡೆದಿರುವ ಅವಘಡ ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಇಲ್ಲಿನ ತುಂಗಾ ಜಲಾಶಯದಲ್ಲೂ ಒಂದು ಗೇಟ್‌ನ ರೂಪ್ ಹಾಳಾಗಿದ್ದು, ಉಳಿದ ಗೇಟ್‌ಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಸಪೇಟೆಯ ಟಿಬಿ ಡ್ಯಾಂನ ಒಂದು ಗೇಟ್ ಕಳಚಿ ಬಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದನ್ನು ತಪ್ಪಿಸಲು ಕೊಚ್ಚಿ ಹೋಗಿರುವ 19ನೇ ಗೇಟ್ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ನಡೆಯತ್ತಿದೆ. ಇದೇ ರೀತಿ ತುಂಗಾ ಜಲಾಶಯದ 22 ಗೇಟ್‌ಗಳಲ್ಲಿ ಒಂದು ಗೇಟ್‌ನ ರೂಪ್ ಹಾಳಾಗಿದ್ದು, ಬೇರೆ ಗೇಟುಗಳು ಸರಿಯಾಗಿವೆಯೇ ಎಂಬುದನ್ನು ತಜ್ಞರು ಪರಿಶೀಲಿಸಿ ಮುಂದೆ ದೊಡ್ಡ ಮಟ್ಟದ ಅವಘಡ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
1952ರಲ್ಲಿ ಆರಂಭವಾದ ತುಂಗಾ ಜಲಾಶಯ 3.14 ಟಿಎಂಸಿ ನೀರು ಸಂಗ್ರಹಿಸುತ್ತಿದ್ದು, ಈಗ ಜಲಾಶಯದ ಕೆಳಗೆ ಸಾಕಷ್ಟು ಹೂಳು ಮತ್ತು ಮರಳು ಸಂಗ್ರಹ ವಾಗಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಹೂಳು ಮತ್ತು ಮರಳು ತೆಗೆಸಿ ಹೆಚ್ಚು ನೀರು ಸಂಗ್ರಹವಾಗಲು ಗಮನಹರಿಸಬೇಕು. ಜೊತೆಗೆ ಭದ್ರಾ ಜಲಾಶಯದಲ್ಲೂ ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ಸಹ ಸರ್ಕಾರ ಕೂಡಲೇಗಮನಹರಿಸಬೇಕು ಎಂದು ಆಗ್ರಹಿಸಿದರು.
ಇನ್ನು, ಮಹಾನಗರ ಪಾಲಿಕೆಗೆ ಚುನಾವಣೆಯಾಗದೇ 8 ತಿಂಗಳಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ, ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. 24X7 ಕುಡಿಯುವ ನೀರು ಸಂಪರ್ಕ ವ್ಯವಸ್ಥೆ ನಗರದ ಹಲವರು ಬಡಾವಣೆಗಳಲ್ಲಿ ಇದ್ದರೂ ಸಹ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಅನೇಕ ಕಡೆ ಹಳೇ ವ್ಯವಸ್ಥೆಯೇ ಮುಂದುವರೆದಿದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಮಾತ್ರ ನೀರು ಸರಬರಾಜು ಮಾಡಿ, ಇಲ್ಲದಿದ್ದರೆ ಹಳೆಯ ವ್ಯವಸ್ಥೆಯನ್ನೇ ಮುಂದು ವರೆಸಿ ಮತ್ತು ಕುಡಿಯುವ ನೀರಿನ ಪೈಪ್‌ಗೆ ಕೊಳಚೆ ನೀರು ಸೇರದಂತೆ ನೋಡಿಕೊಳ್ಳಬೇಕಾದದ್ದು ಅಧಿಕಾರಿಗಳ ಜವಾಬ್ದಾರಿ. ಇದರಿಂದ ನಗರದಲ್ಲಿ ಜಾಂಡೀಸ್ ನಂತಹ ಕಾಯಿಲೆಗಳು ಕೂಡ ಹೆಚ್ಚಾಗುತ್ತಿವೆ ಎಂದು ದೂರಿದರು.
‘ಶೀಘ್ರವೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿ’
ಸರ್ಕಾರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಸರ್ಕಾರ ಜಿಲ್ಲಾಧಿಕಾರಿಗಳಿಗೆ 4 ಬಾರಿ ಪತ್ರ ಬರೆದಿದ್ದು, ಅದೇ ರೀತಿ ಜಿಲ್ಲಾಧಿಕಾರಿಗಳು ಸಹ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆದರೆ, ಪಾಲಿಕೆ ಆಯುಕ್ತರಿಂದ ಯಾವುದೇ ಉತ್ತರ ಬಂದಿಲ್ಲ. ಚುನಾವಣಾ ಆಯೋಗ ಪಾಲಿಕೆ ಚುನಾವಣೆ ನಡೆಸಲು ಮುಂದಾಗಿದೆ. ಶೀಘ್ರವೇ ಚುನಾವಣೆ ದಿನಾಂಕ ಘೋಷಣೆ ಆಗಬೇಕು. ಜನರ ತೊಂದರೆ ತಪ್ಪಿಸಬೇಕು. ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು ನಗರದ ಸುತ್ತಮುತ್ತಲ ಗ್ರಾಮಗಳನ್ನು ಸೇರಿಸಿ ಹೆಚ್ಚಿಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಸಿಂಗ್,ರಘು, ನರಸಿಂಹ ಗಂಧದಮನೆ, ಸಂಗಯ್ಯ ಸೇರಿದಂತೆ ಹಲವರಿದ್ದರು.