ತುಂಗಭದ್ರಾ ಅಚ್ಚುಕಟ್ಟು ರೈತರ ಕಣ್ಣಲ್ಲಿ ಜಿನುಗುವ ಕಣ್ಣೀರು

| Published : Aug 15 2024, 01:55 AM IST

ಸಾರಾಂಶ

ಹಿನ್ನೀರು ಇಳಿಮುಖವಾದಂತೆ ಏತ ನೀರಾವರಿಗಳಿಗೆ ನೀರು ಸರಬರಾಜು ಸ್ಥಗಿತಗೊಂಡು ರೈತರ ಬೆಳೆಗಳು ನಷ್ಟಕ್ಕೆ ತುತ್ತಾಗುತ್ತವೆ.

ಸುರೇಶ ಯಳಕಪ್ಪನವರ

ಹಗರಿಬೊಮ್ಮನಹಳ್ಳಿ: ತಾಲೂಕಿನ ತುಂಗಭದ್ರಾ ಹಿನ್ನೀರು ಅಚ್ಚುಕಟ್ಟಿನಲ್ಲಿರುವ ಬಹುತೇಕ ರೈತರು "ದೇವ್ರೇ ಕಾಪಾಡಪ್ಪ, ನಮ್ಮ ನೀರು ನದಿಗೆ ಹೋಗೋದು ನಿಲ್ಸಪ್ಪ.... " ಎಂದು ಬೇಡಿಕೊಳ್ಳುತ್ತಿದ್ದಾರೆ.

ಈ ಹಿನ್ನೀರನ್ನು ನೆಚ್ಚಿಕೊಂಡು ತಾಲೂಕಿನ ೧೪ ಏತ ನೀರಾವರಿ ವ್ಯಾಪ್ತಿಯ ರೈತರು ಪ್ರಮುಖವಾಗಿ ಮೆಕ್ಕೆಜೋಳ, ಭತ್ತ, ಈರುಳ್ಳಿ, ಶೇಂಗಾ, ಅಲಸಂದಿ ಬೆಳೆ ಬೆಳೆಯುತ್ತಾರೆ. ಹಿನ್ನೀರು ಇಳಿಮುಖವಾದಂತೆ ಏತ ನೀರಾವರಿಗಳಿಗೆ ನೀರು ಸರಬರಾಜು ಸ್ಥಗಿತಗೊಂಡು ರೈತರ ಬೆಳೆಗಳು ನಷ್ಟಕ್ಕೆ ತುತ್ತಾಗುತ್ತವೆ. ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಆಗದೇ ಇರುವುದರಿಂದ ಮೊದಲಿಗೆ ಬಿತ್ತನೆ ಮಾಡಿದ್ದ ಮೆಕ್ಕೊಜೋಳ ಬೆಳೆ ಸಂಪೂರ್ಣ ಕೈಕೊಟ್ಟಿವೆ. ಇನ್ನೇನು ಮೇಲ್ಭಾಗದಲ್ಲಿ ಮಳೆಯಾಯ್ತು, ನಮ್ಮ ಹೊಳೆ ತುಂಬಿತು, ನಮ್ಮ ಬೋರ್‌ಗಳು ರಿಚಾರ್ಜ್ ಆಗುತ್ತವೆ ಎನ್ನುವಷ್ಟರಲ್ಲಿಯೇ ಡ್ಯಾಂನ ೧೯ನೇ ಕ್ಟಸ್ಟ್ ಗೇಟ್‌ ಮುರಿದಿದ್ದರಿಂದಾಗಿ ರೈತರಲ್ಲಿದ್ದ ಉತ್ಸಾಹ ಮಂಕಾಗಿದೆ.

ಮಳೆ ಕೊರತೆಯಿಂದಾಗಿ ತಾಲೂಕಿನಾದ್ಯಂತ ಬೋರ್‌ವೆಲ್‌ಗಳು ನೀರು ಹರಿಸುತ್ತಿಲ್ಲ. ಮಳೆಗಾಲದಲ್ಲಿಯೇ ಬೋರ್‌ಗಳು ಸ್ಥಗಿತಗೊಂಡರೆ ಬೇಸಿಗೆಯಲ್ಲಿ ಜೀವನ ಮಾಡುವುದು ಹೇಗೆ ಎಂಬುದು ರೈತರ ಅಳಲು. ತಾಲೂಕಿನ ರೈತರು ಹಿನ್ನೀರು ಎಷ್ಟು ಸರಿದಿದೆ ಎಂದು ಹೊಳೆ ಹತ್ತಿರ ಹೋಗಿ ನೋಡಿ ಸಪ್ಪೆ ಮೋರೆ ಹಾಕುತ್ತಿದ್ದಾರೆ. ಜೊತೆಗೆ ಎಷ್ಟು ಕ್ಯುಸೆಕ್ ನೀರು ಹೊರಹೋಗುತ್ತದೆ ಎಂಬ ಸುದ್ದಿಯನ್ನು ರೈತರು ಕೇಳಿ ಆತಂಕಕ್ಕೊಳಗಾಗಿದ್ದಾರೆ. ಅಚ್ಚುಕಟ್ಟು ಪ್ರದೇಶದ ಯಾವುದೇ ಗ್ರಾಮಗಳ ಅಂಗಡಿಗಳ ಬಳಿ ಕುಂತರೂ ಬರೀ ಡ್ಯಾಂ ನೀರು ಹೋಗುವ ಕುರಿತ ಚರ್ಚೆ ಪ್ರಚಲಿತದಲ್ಲಿದೆ.

ಹಿಂಗಾರು ಕೈಹಿಡಿಯುವುದೇ?:

ಹೊಳೆ ನೀರು ಐದಾರು ತಿಂಗಳು ನಿಂತುಕೊಂಡರೆ ಮಾತ್ರ ತಾಲೂಕಿನ ರೈತರಿಗೆ ಅನ್ನ, ಇಲ್ಲವಾದರೆ ಇಲ್ಲಿಯ ರೈತರು ಗುಳೆಹೋಗುವ ಪರಿಸ್ಥಿತಿ ಎದುರಾಗುತ್ತದೆ. ಸರ್ಕಾರ ಕೂಡಲೇ ಡ್ಯಾಂಗೆ ಕ್ರಸ್ಟ್‌ಗೇಟ್‌ ಅಳವಡಿಸಿ ರೈತರ ಮನಸು ಗೆಲ್ಲಬೇಕಿದೆ. ಈಗ ನದಿಗೆ ಹೊರಟಿರುವ ನೀರು ಪುನಃ ತುಂಬಬೇಕಾದರೆ ಹಿಂಗಾರು ಮಳೆಗಳನ್ನು ನೆಚ್ಚುವಂತಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತೆ ಡ್ಯಾಂ ತುಂಬುತ್ತದೆ ಎಂಬ ಮಾತನ್ನು ಆಡಿರುವುದು ರೈತರಲ್ಲಿ ಸ್ವಲ್ಪ ಉತ್ಸಾಹ ಮೂಡಿಸಿದೆ.

ಮೊದಲಿಗೆ ಮಳೆ ನೆಚ್ಚಿಕೊಂಡು ಹಾಕಿರುವ ಮೆಕ್ಕೆಜೋಳ, ಇತರೆ ಬೆಳೆಗಳು ನಷ್ಟದಲ್ಲಿವೆ. ಇನ್ನೇನು ಹೊಳೆ ಬಂತು, ಮುಂದಿನ ಬೆಳೆ ಚೆನ್ನಾಗಿ ಬೆಳೆದು ಸಾಲ ತೀರಿಸೋಣ ಅಂದರೆ ಡ್ಯಾಂ ಗೇಟ್‌ ಮುರಿದಿರುವುದು ರೈತರಿಗೆ ನೋವುಂಟು ಮಾಡಿದೆ. ಸರ್ಕಾರ ಕೂಡಲೇ ಕ್ರಸ್ಟ್‌ ಗೇಟ್ ರಿಪೇರಿ ಮಾಡಿಸಿ ರೈತರ ಬದುಕಿಗೆ ನೆರವಾಗಬೇಕು ಎನ್ನುತ್ತಾರೆ ಕಿತ್ನೂರು ಗ್ರಾಮದ ರೈತ ಗೊಂಡಬಾಳ ಬಸವರಾಜ.

ವ್ಯವಸಾಯ ನಂಬಿ ಜೀವನ ಮಾಡೋದು ಕಷ್ಟ ಐತ್ರಿ. ಪ್ರತಿವರ್ಷ ಒಂದಲ್ಲ. ಒಂದು ಸಮಸ್ಯೆಯಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಹೀಗೆ ಕಳೆದ ಎರಡ್ಮೂರು ವರ್ಷದಿಂದ ರೈತರು ಬೆಳೆನಷ್ಟ ಅನುಭವಿಸಿ ಕಣ್ಣೀರಲ್ಲ್ಲಿ ಕೈತೊಳೆಯುವಂತಾಗಿದೆ. ಈ ವರ್ಷನಾದರೂ ಒಂದು ಬೆಳೆ ಚೆನ್ನಾಗಿ ಬೆಳೆದು ಸ್ವಲ್ಪ ಸಾಲ ಹರ‍್ಕೊಳ್ಳೋನಾ ಅನ್ನುವಷ್ಟರಲ್ಲಿ ಡ್ಯಾಂ ನೀರು ಪೋಲಿನಿಂದಾಗಿ ರೈತರ ಬದುಕಿನ ಉತ್ಸಾಹ ಕಮರಿಹೋಗಿದೆ ಎನ್ನುತ್ತಾರೆ ಯುವರೈತ ಬಸರಕೋಡು ಧನಂಜಯ ಮೇಟಿ.