ತೆರಿಗೆ ಪಾವತಿಗಾಗಿ ಜಿ.ಟಿ.ಮಾಲ್‌ ನೀಡಿದ್ದ ಚೆಕ್‌ ಬೌನ್ಸ್‌: ಜಿಟಿ ಮಾಲ್‌ಗೆ ಮತ್ತೆ ಬೀಗ?

| Published : Aug 03 2024, 01:30 AM IST / Updated: Aug 03 2024, 06:20 AM IST

ತೆರಿಗೆ ಪಾವತಿಗಾಗಿ ಜಿ.ಟಿ.ಮಾಲ್‌ ನೀಡಿದ್ದ ಚೆಕ್‌ ಬೌನ್ಸ್‌: ಜಿಟಿ ಮಾಲ್‌ಗೆ ಮತ್ತೆ ಬೀಗ?
Share this Article
  • FB
  • TW
  • Linkdin
  • Email

ಸಾರಾಂಶ

₹1.70 ಕೋಟಿ ತೆರಿಗೆ ಪಾವತಿಗಾಗಿ ಜಿ.ಟಿ.ಮಾಲ್‌ ನೀಡಿದ್ದ ಚೆಕ್‌ ಬೌನ್ಸ್‌ ಆಗಿದೆ. ಇದರಿಂದ ಮಾಲ್‌ಗೆ ಬೀಗ ಜಡಿಯಲು ಬಿಬಿಎಂಪಿ ಅಧಿಕಾರಿಗಳು ಮುಂದಾಗುವ ಸಾಧ್ಯತೆ ಇದೆ.

 ಬೆಂಗಳೂರು :  ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಗೆ ಮಾಗಡಿ ರಸ್ತೆ ಜಿ.ಟಿ.ವರ್ಲ್ಡ್‌ ಮಾಲ್‌ ಮಾಲೀಕರು ನೀಡಿದ್ದ ಚೆಕ್‌ ಬೌನ್ಸ್‌ ಆಗಿದ್ದು, ಶುಕ್ರವಾರ ಮಾಲ್‌ ಸೀಜ್‌ ಮಾಡಲು ಹೋದ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸೀಜ್‌ ಮಾಡದೇ ವಾಪಾಸ್‌ ಆಗಿದ್ದಾರೆ.

ಪಂಚೆಧಾರಿ ರೈತನ ಪ್ರವೇಶಕ್ಕೆ ನಿರಾಕರಿಸಿದ ಸಂದರ್ಭದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂದು ಜಿ.ಟಿ.ವರ್ಲ್ಡ್‌ ಮಾಲ್‌ಗೆ ಬೀಗ ಹಾಕಿ ಸೀಜ್‌ ಮಾಡಲಾಗಿತ್ತು. ಆಗ ಮಾಲ್‌ ಮಾಲೀಕರು ಆಸ್ತಿ ತೆರಿಗೆ ಪಾವತಿ ಸುಮಾರು ₹1.70 ಕೋಟಿ ಮೊತ್ತದ ಚೆಕ್ಕನ್ನು ಬಿಬಿಎಂಪಿಗೆ ನೀಡಿದ್ದರು. ಆ ಚೆಕ್‌ ಗುರುವಾರ ಬೌನ್ಸ್‌ ಆಗಿದೆ.

ಹೀಗಾಗಿ, ನೋಟಿಸ್‌ ನೀಡಿ ಶುಕ್ರವಾರ ಸೀಜ್‌ ಮಾಡುವುದಕ್ಕೆ ಕಂದಾಯ, ಆರೋಗ್ಯ ವಿಭಾಗದ ಅಧಿಕಾರಿಗಳು ಮಾಲ್‌ಗೆ ತೆರಳಿದ್ದರು. ಈ ವೇಳೆ ಮಾಲ್‌ ಮಾಲೀಕರೊಂದಿಗೆ ನಡೆದ ಅಂತರಿಕ ಸಭೆಯ ಬಳಿಕ ವರಸೆ ಬದಲಿದ ಬಿಬಿಎಂಪಿಯ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಸೀಜ್‌ ಮಾಡದೇ ವಾಪಸ್‌ ಬಂದಿದ್ದಾರೆ.

ಈ ಕುರಿತು ವಿವರಣೆ ನೀಡಿದ ಬಿಬಿಎಂಪಿ ದಕ್ಷಿಣ ವಲಯದ ಕಂದಾಯ ವಿಭಾಗದ ಉಪ ಆಯುಕ್ತೆ ವಿಜಯಲಕ್ಷ್ಮಿ, ಜಿ.ಟಿ.ಮಾಲ್‌ ಮಾಲೀಕರು ಸಲ್ಲಿಸಿದ್ದ ಚೆಕ್‌ ಬೌನ್ಸ್‌ ಆಗಿದೆ. ಮಾಲ್‌ ಸೀಜ್‌ಗೆ ಮುಖ್ಯ ಆಯುಕ್ತರ ಆದೇಶ ಬಾಕಿ ಇದೆ. ಹಾಗಾಗಿ, ಶುಕ್ರವಾರ ಸೀಜ್‌ ಮಾಡಲು ಹೋದವರು ವಾಪಾಸ್‌ ಬಂದಿದ್ದಾರೆ. ಶನಿವಾರ ಮುಖ್ಯ ಆಯುಕ್ತರು ಆದೇಶದೊಂದಿಗೆ ಮಾಲ್‌ ಸೀಜ್‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ.