ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆಯಡಿ ಚೆಕ್‌ ಡ್ಯಾಮ್‌ ನೀರೆತ್ತುವ ಕಾರ್ಯ ಯಶಸ್ವಿ

| Published : Jul 01 2024, 01:47 AM IST

ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆಯಡಿ ಚೆಕ್‌ ಡ್ಯಾಮ್‌ ನೀರೆತ್ತುವ ಕಾರ್ಯ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಎತ್ತಿನಹೊಳೆ ಕುಡಿಯುವ ನ ಯೋಜನೆ ಭಾಗವಾಗಿ ಸಕಲೇಶಪುರ ತಾಲೂಕಿನಲ್ಲಿ ನಿರ್ಮಿಸಿರುವ 8 ಚೆಕ್‌ ಡ್ಯಾಮ್‌ಗಳ ಪೈಕಿ ಎರಡರಿಂದ ಇತರೆಡೆ ನೀರನ್ನು ಹರಿಸಲು ನೀರೆತ್ತುವ ಕಾರ್ಯ ಶನಿವಾರ ಯಶಸ್ವಿಯಾಗಿದೆ.

ಕಾಡುಮನೆ ಹೊಳೆಗೆ ನಿರ್ಮಿಸಿರುವ ಎರಡು ಚೆಕ್ ಡ್ಯಾಮ್‌ನಿಂದ ಕುಡಿಯುವ ನೀರು । ನಾಗರ ಗ್ರಾಮದಲ್ಲಿ ವಿತರಣಾ ತೊಟ್ಟಿಗೆ ಪೂರೈಕೆ

ಶ್ರೀವಿದ್ಯಾ ಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎತ್ತಿನಹೊಳೆ ಕುಡಿಯುವ ನ ಯೋಜನೆ ಭಾಗವಾಗಿ ತಾಲೂಕಿನಲ್ಲಿ ನಿರ್ಮಿಸಿರುವ 8 ಚೆಕ್‌ ಡ್ಯಾಮ್‌ಗಳ ಪೈಕಿ ಎರಡರಿಂದ ಇತರೆಡೆ ನೀರನ್ನು ಹರಿಸಲು ನೀರೆತ್ತುವ ಕಾರ್ಯ ಶನಿವಾರ ಯಶಸ್ವಿಯಾಗಿದೆ.

ಶನಿವಾರ ಮುಂಜಾನೆ 8.45ಕ್ಕೆ ಕಾಡುಮನೆ ಗ್ರಾಮದಲ್ಲಿರುವ ಚೆಕ್‌ ಡ್ಯಾಂ 4 ಹಾಗೂ 5 ರಿಂದ ವಿದ್ಯುಕ್ತವಾಗಿ ಚಾಲನೆ ನೀಡಿದ್ದು ಕೇವಲ ಅರ್ಧ ಗಂಟೆಯಲ್ಲಿ 25 ಕಿ.ಮೀ. ದೂರದ ನಾಗರ ಗ್ರಾಮದಲ್ಲಿ ನಿರ್ಮಿಸಿರುವ ವಿತರಣಾ ತೊಟ್ಟಿ 3ಕ್ಕೆ ನೀರು ತಲುಪಲು ಯಶಸ್ವಿಯಾಗಿದೆ. ಸಂಜೆ 4ರ ವರಗೆ ನೀರೆತ್ತುವ ಕಾರ್ಯ ನಡೆದಿದ್ದು 40 ಕ್ಯೂಸೆಕ್‌ ಸಾಮರ್ಥ್ಯದ ವಿತರಣಾ ತೊಟ್ಟಿ ಸಂಪೂರ್ಣ ಭರ್ತಿಯಾಗಿದೆ.

ತಾಲೂಕಿನಲ್ಲಿ 8 ಚೆಕ್ ಡ್ಯಾಮ್ ನಿರ್ಮಿಸಲಾಗಿದೆ. ಈ ಎಲ್ಲ ಚೆಕ್ ಡ್ಯಾಮ್‌ಗಳಿಂದ ನಾಗರ ಗ್ರಾಮದಲ್ಲಿ ವಿತರಣಾ ತೊಟ್ಟಿಗೆ ನೀರನ್ನು ಎತ್ತಬೇಕಿದೆ. ಆರಂಭಿಕವಾಗಿ ಕಾಡುಮನೆ ಹೊಳೆಗೆ ನಿರ್ಮಿಸಿರುವ ಚೆಕ್ ಡ್ಯಾಮ್‌ನಿಂದ ಯಶಸ್ವಿಯಾಗಿ ನೀರನ್ನು ಮೇಲೆತ್ತಲಾಗಿದ್ದು ಇನ್ನೂ ಎತ್ತಿನಹೊಳೆ, ಹಿರದನಹಳ್ಳಿಹೊಳೆ ಹಾಗೂ ಕಡಗರಹಳ್ಳಿಹೊಳೆಗೆ ನಿರ್ಮಿಸಿರುವ ಇನ್ನುಳಿದ ಆರು ಚೆಕ್‌ಡ್ಯಾಮ್‌ನಿಂದ ನೀರು ಮೇಲೆತ್ತ ಬೇಕಿದೆ. ಮುಂದಿನ 10 ದಿನಗಳಲ್ಲಿ ಎತ್ತಿನಹಳ್ಳ ಗ್ರಾಮ ಸಮೀಪ ಎತ್ತಿನಹೊಳೆಗೆ ನಿರ್ಮಿಸಿರುವ ಚೆಕ್‌ಡ್ಯಾಮ್ ಒಂದರಿಂದ ನೀರು ಮೇಲೆತ್ತಲು ಸಿದ್ಧತೆ ನಡೆದಿದೆ.

ಎಷ್ಟು ಚೆಕ್ ಡ್ಯಾಮ್:

ಹಲವು ಪರ ವಿರೋಧದ ನಡುವೆ 2014ರಲ್ಲಿ 8 ಕೋಟಿ ರು. ವೆಚ್ಚದಲ್ಲಿ ಆರಂಭವಾದ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿ 2024ರ ವೇಳೆಗೆ 23 ಸಾವಿರ ಕೋಟಿ ರು.ಗೆ ತಲುಪಿದೆ. ತಾಲೂಕಿನಲ್ಲಿ ಬಹುತೇಕ ಕಾಮಗಾರಿ ಮುಕ್ತಾಯಗೊಳಿಸಲು ಇಲಾಖೆ ಯಶಸ್ವಿಯಾಗಿದೆ.

ಆದರೆ, ಕಾಮಗಾರಿ ಪೂರ್ಣಗೊಂಡರೂ ನೀರು ಮೇಲೆತ್ತಲು ಸಾದ್ಯವೇ? ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರನ್ನು ಕಾಡುತಿತ್ತು. ನವೆಂಬರ್ 2023ರಲ್ಲಿ ಕಾಡುಮನೆ ಹೊಳೆಗೆ ನಿರ್ಮಿಸಲಾಗಿರುವ ಅಣೆಕಟ್ಟೆ 4 ಹಾಗೂ ಅಣೆಕಟ್ಟೆ 5 ರಿಂದ ಪ್ರಯೋಗಿಕವಾಗಿ ತಾಲೂಕಿನ ನಾಗರ ಗ್ರಾಮದ ವಿತರಣಾ ತೊಟ್ಟಿ 3 ಕ್ಕೆ ನೀರೆತ್ತುವ ಪ್ರಯತ್ನ ನಡೆಸಲಾಗಿತ್ತಾದರೂ ಹಲವೆಡೆ ಪೈಪ್‌ಗಳಲ್ಲಿ ನೀರು ಸೋರಿಕೆ ಹೆಚ್ಚಿದ್ದರಿಂದ ಸಾಕಷ್ಟು ಜಮೀನುಗಳು ಹಾನಿಗೊಂಡಿದ್ದವು.

ಇದರಿಂದ ಸ್ಥಳೀಯರು ಇಲಾಖೆಯ ಅಧಿಕಾರಿಗಳ ಮೇಲೆ ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಹಾನಿಗೊಂಡ ಜಮೀನುಗಳಿಗೆ ಪರಿಹಾರ ಸಹ ನೀಡಲಾಗಿತ್ತು. ಬಾಕಿ ಉಳಿದಿರುವ ಅಣೆಕಟ್ಟೆಗಳ ಮೋಟರ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕೆಪಿಟಿಸಿಲ್ ಅಧಿಕಾರಿಗಳಿಂದ ತಪಾಸಣೆ ನಡೆಸಿ ಒಪ್ಪಿಗೆ ನೀಡುವ ಕಾರ್ಯ ಮಾತ್ರ ಬಾಕಿ ಉಳಿದಿದೆ.

ಮೇ ತಿಂಗಳ ಅಂತ್ಯದಲ್ಲಿ ಜಲ ಜಲಸಂಪನ್ಮೂಲ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಎತ್ತಿನಹೊಳೆ ಯೋಜನೆಯ ಅಣೆಕಟ್ಟೆ ಒಂದಕ್ಕೆ ಭೇಟಿ ನೀಡಿ ಕಾಮಗಾರಿಗೆ ವೇಗ ನೀಡುವಂತೆ ತಿಳಿಸಿದ್ದರು. ಜೂನ್ ಅಂತ್ಯಕ್ಕೆ ಪ್ರಾಯೋಗಿಕವಾಗಿ ನೀರೆತ್ತುವುದು ನಿಶ್ಚಿತ ಎಂದು ವಿಶ್ವಶ್ವೇರಯ್ಯ ಜಲನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಭರವಸೆ ನಿಡಿದ್ದರು.

ಅಣೆಕಟ್ಟೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಮಾರ್ಗ ರೈಲ್ವೆ ಹಳಿ ದಾಟಿ ಬರಬೇಕಿದ್ದರಿಂದ ರೈಲ್ವೆ ಇಲಾಖೆ ಕಾಮಗಾರಿ ನಡೆಸಲು ಒಪ್ಪಿಗೆ ಸೂಚಿಸಲು ವಿಳಂಬಮಾಡಿದ ಕಾರಣ ಇದುವರೆಗೆ ವಿದ್ಯುತ್ ಸಂಪರ್ಕ ನೀಡಲು ಸಾದ್ಯವಾಗಿಲ್ಲ. ಈ ವರ್ಷದ ಮಳೆಗಾಲದಲ್ಲಿ ಕಾಡುಮನೆಹೊಳೆ ಹಾಗೂ ಎತ್ತಿನಹೊಳೆಯಿಂದ ಮಾತ್ರ ನೀರು ಹೊರ ಹರಿಯಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಹೇಳುತ್ತಾರೆ.

ನಿರಂತರ ಎಂಜನಿಯರ್‌ಗಳ ಶ್ರಮದ ಫಲವಾಗಿ ಎತ್ತಿನಹೊಳೆ ಯೋಜನೆಯ ಎರಡು ಅಣೆಕಟ್ಟೆಗಳಿಂದ ಯಶಸ್ವಿಯಾಗಿ ನೀರನ್ನು ಮೇಲೆತ್ತಿದ್ದೇವೆ.

ವೆಂಕಟೇಶ್, ಕಾರ್ಯಪಾಲಕ ಅಭಿಯಂತರ, ಎತ್ತಿನಹೊಳೆ ಯೋಜನೆ 1, ಸಕಲೇಶಪುರ.