ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ನಡೆಯಿತು.

ನಾಪೋಕ್ಲು: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ನಡೆಯಿತು.

ಕ್ರೀಡಾ ಸಮಿತಿಯ ಉಪಾಧ್ಯಕ್ಷ ಚೆಯ್ಯಂಡ ನಂದ ನಾಚಪ್ಪ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ಚೇನಂಡ ಸಂಪತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಸೈನಿಕ ಚೆಯ್ಯಂಡ ಶಂಕರಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ನರಿಯಂದಡ ತಂಡದ ವಿಶ್ವಪ್ರೀತ್, ಕೊಕೇರಿ ತಂಡದ ನಿವೃತ್ತ ಸೈನಿಕ ಚೇನಂಡ ಸಚಿನ್ ಹಾಗೂ ಚೇಲಾವರ ತಂಡದ ಹಾರ್ಥಿಕ್ ಕಾಳಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.

ಪುರುಷರ ಹಗ್ಗಜಗ್ಗಾಟದಲ್ಲಿ ನರಿಯಂದಡ ತಂಡ ಚಾಂಪಿಯನ್ ಪ್ರಶಸ್ತಿ, ಚೇಲಾವರ ತಂಡ ರನ್ನರ್ಸ್ ಅಪ್ ಪ್ರಶಸ್ತಿಪಡೆಯಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಚೇಲಾವರ ತಂಡವು ಚಾಂಪಿಯನ್, ಕೊಕೇರಿ ತಂಡ ರನ್ನರ್ಸ್ ಸ್ಥಾನ ಪಡೆಯಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಚೇನಂಡ ಎಂ.ಸಂಪತ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಕುಪ್ಪೋಡಂಡ ರಫೀಕ್ ಭಾಗವಹಿಸಿದ್ದರು. ಅತಿಥಿ ನಿವೃತ್ತ ಸೈನಿಕ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ಶುಭ ಹಾರೈಸಿದರು. ಚೇನಂಡ ಸಂಪತ್, ಕ್ರೀಡಾಕೂಟ ಕ್ಕೆ

ಸರ್ಕಾರದಿಂದ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಪ್ರಗತಿಪರ ಕೃಷಿಕ ಮಕ್ಕಿಮನೆ ಸುಧೀರ್, ನಾಟಿ ವೈದ್ಯ ಪಡಿಂಞರಮ್ಮಂಡ ನಂದಕುಮಾರ್, ಕೃಷಿಕ ಕುಮ್ಮಂಡ ಕಾವೇರಪ್ಪ, ಕ್ರೀಡಾಪಟು ಹಾಗೂ ಪೋಸ್ಟ್ ಮಾಸ್ಟರ್ ಪಟ್ಟಚೇರುವಂಡ ಜೀವನ್ ಮುದ್ದಪ್ಪ ಮತ್ತು ಚೆಯ್ಯಂಡ ಪ್ರಕಾಶ್ ಶುಭ ಹಾರೈಸಿದರು.ಸಮಿತಿಯ ಉಪಾಧ್ಯಕ್ಷ ನಂದ ನಾಚಪ್ಪ, ಕಾರ್ಯದರ್ಶಿ ಸುನಿಲ್, ಕೋಶಾಧಿಕಾರಿ ನಮೂ ಚಿಯಣ್ಣ, ಸಂಚಾಲಕ ಹರಿಪ್ರಸಾದ್ ಹಾಗೂ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅನಂತ್ ಕುಮಾರ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.