ವಿಜಯಪುರ: ಕೃಷಿ ಭೂಮಿಯಲ್ಲಿ ನಿರಂತರವಾಗಿ ಹಾಗೂ ಅತಿಯಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯ ಹಾನಿಯಾಗುವ ಜೊತೆಗೆ, ದಿನಕಳೆದಂತೆ ಬೆಳೆಗಳ ಇಳುವರಿಯೂ ಸಹ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಹಾಡೋನಹಳ್ಳಿ ಕೆವಿಕೆ ಕೃಷಿ ವಿಜ್ಞಾನಿ ಡಾ. ಬಾಲಾಜಿ ನಾಯಕ್ ತಿಳಿಸಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಮ್ಮಿಕೊಂಡಿದ್ದ ಭೂಮಿ ಉಳಿಸಿ ಆಂದೋಲನ ಹಾಗೂ ಬೀಜೋಪಚಾರ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ಸದಾ ನೀರು ನಿಲ್ಲುವುದು ಅಥವಾ ಮೇಲಿಂದ ಮೇಲೆ ನೀರು ಹರಿದು ಹೋಗುವುದರಿಂದ ಮಣ್ಣಿನಲ್ಲಿರುವ ಪ್ರಮುಖ ಪೋಷಕಾಂಶಗಳು ಕ್ಷೀಣಿಸುತ್ತವೆ. ಭೂಮಿಯಲ್ಲಿ ಪೋಷಕಾಂಶಗಳು ಇಲ್ಲವಾದಾಗ ಮಣ್ಣನ್ನು ಸರಿಯಾದ ಕ್ರಮದಲ್ಲಿ ಉಪಚರಿಸಬೇಕು. ರೈತರು ಮಣ್ಣಿನ ಆರೋಗ್ಯ ರಕ್ಷಣೆ, ರಸಗೊಬ್ಬರಗಳ ಸಮತೋಲನ ಬಳಕೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಅರಿವು ಹೊಂದಬೇಕು ಎಂದರು.ಡಾ.ಪ್ರಸನ್ನ ಕುಮಾರ್ ಮಾತನಾಡಿ, ಬೀಜ ಮತ್ತು ಮಣ್ಣಿನಿಂದ ಬೆಳೆಗೆ ಬರಬಹುದಾದ ಮಾರಕ ರೋಗಗಳನ್ನು ತಡೆಗಟ್ಟಲು ಬೀಜೋಪಚಾರ ಸಹಾಯಕ. ಇದರಿಂದ ಕೀಟಗಳಿಂದ ಬೆಳೆಗಳಿಗಾಗುವ ಹಾನಿ ನಿರ್ವಹಿಸಬಹುದು. ರೈತರು ಬೆಳೆಗಳಿಗೆ ಅನಗತ್ಯಮತ್ತು ಅತಿ ಕೀಟನಾಶಕ ಸಿಂಪಡಿಸಬಾರದು, ಕೃಷಿ ಇಲಾಖೆಯ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ರಾಜಲಕ್ಷ್ಮಿ, ಕೃಷಿ ಅಧಿಕಾರಿ ಶ್ವೇತಾ, ಪ್ರಗತಿಪರ ರೈತರು ಪಾಲ್ಗೊಂಡಿದ್ದರು.(ಫೋಟೋ ಕ್ಯಾಪ್ಷನ್)
ವಿಜಯಪುರ ರೈತ ಸಂಪರ್ಕ ಕೇಂದ್ರದಲ್ಲಿ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಭೂಮಿ ಉಳಿಸಿ ಆಂದೋಲನದಡಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.