ಸಾರಾಂಶ
ಬೆಂಗಳೂರು : ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಗುಣಮಟ್ಟದ ಕೀಮೋಥೆರಪಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಶುಕ್ರವಾರದಿಂದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ರಾಜ್ಯ ಸರ್ಕಾರವು ಆರಂಭಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಕೇಂದ್ರಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬಜೆಟ್‌ನಲ್ಲಿಯೇ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರು, ವಿಜಯಪುರ, ಉಡುಪಿ, ಬಳ್ಳಾರಿ ಧಾರವಾಡ, ದಾವಣಗೆರೆ, ಬಾಗಲಕೋಟೆ ಸೇರಿದಂತೆ ರಾಜ್ಯದ 16 ಜಿಲ್ಲಾಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ನೋಂದಾಯಿತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ಬಳಿಕ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಾಗಿ ಈ ಕೇಂದ್ರಗಳು ಸಹಕಾರಿಯಾಗಲಿವೆ. ರಾಜ್ಯದಲ್ಲಿ ಸುಮಾರು 70 ಸಾವಿರದಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ ಕೀಮೋಥೆರಪಿ ಚಿಕಿತ್ಸೆಗಾಗಿ ಶೇ.60ರಷ್ಟುರೋಗಿಗಳು 100 ಕಿ.ಮೀ.ಗಿಂತ ಹೆಚ್ಚು ದೂರದಿಂದ ಪ್ರಯಾಣಿಸುತ್ತಾರೆ. ಇವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲಾಸ್ಪತ್ರೆಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಕ್ಯಾನ್ಸರ್ ಆರೈಕೆಯಲ್ಲಿ ನಗರ, ಗ್ರಾಮೀಣ ಅಸಮಾನತೆ ಕಡಿಮೆ ಮಾಡಬೇಕಾಗಿದೆ. ಪರಿಣಾಮಕಾರಿ ಆರೈಕೆ ಮತ್ತು ಸ್ಥಿರ ರೋಗಿಗಳಿಗೆ ಪ್ರಯಾಣ ಮತ್ತು ಆಸ್ಪತ್ರೆ ವೆಚ್ಚ ಕಡಿಮೆ ಮಾಡುವುದು ಕೇಂದ್ರ ಸ್ಥಾಪನೆಯ ಉದ್ದೇಶವಾಗಿದೆ. ಬಡೇ ಕೇರ್ ಕೇಂದ್ರ ಆರಂಭ ಮಾಡುತ್ತಿರುವುದರಿಂದ ರೋಗಿಗಳ ಕಡಿಮೆ ಪ್ರಯಾಣವಾಗಲಿದೆ. ಅವರ ಜಿಲ್ಲೆಯೊಳಗಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಚಿಕಿತ್ಸೆಯಿಂದ ವಂಚಿತರಾಗುವ ಪ್ರಕರಣಗಳು ಕಡಿಮೆಯಾಗಲಿದೆ ಎಂದರು.
ಡೇ ಕೇರ್ ಕೀಮೋಥೆರಪಿ ಕೇಂದ್ರದಲ್ಲಿ ಕೀಮೋಥೆರಪಿ ಚಿಕಿತ್ಸೆ ಮುಂದುವರಿಸಿಕೊಳ್ಳಬಹುದು. ನೋವು ನಿರ್ವಹಣೆ ಚಿಕಿತ್ಸೆ ನೀಡಲಾಗುವುದು ಮತ್ತು ಆಪ್ತ ಸಮಾಲೋಚನೆ ನಡೆಸಲಾಗುವುದು. ಟೆಲಿಮೆಡಿಸಿನ್ ಮೂಲಕವು ಸಹ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ವೈದ್ಯಕೀಯ ಆಂಕೋಲಾಜಿಸ್ಟ್, ಕೀಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ ಇಬ್ಬರು ದಾದಿಯರು, ಫಾರ್ಮಸಿ ಅಧಿಕಾರಿಗಳು, ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.