ಸಾರಾಂಶ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸಿವನ್ನು ನೀಗಿಸುವುದಕ್ಕಾಗಿ ತಾವು ಧರಿಸಿದ ಚಿನ್ನದ ಕಡಗವನ್ನು ಮಾರಿ ಸಂಸ್ಥೆ
ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ
ಭೂಮಂಡಲದಲ್ಲಿ ಸೂರ್ಯ ಚಂದ್ರ ಇರುವವರೆಗೂ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳು ಎಲ್ಲ ಭಕ್ತರ ಮನದಲ್ಲಿ ಅಮರವಾಗಿರುತ್ತಾರೆ ಎಂದು ಹುಲ್ಲಹಳ್ಳಿ ಶಾಂತ ಮಲ್ಲಿಕಾರ್ಜುನ ಕ್ಷೇತ್ರದ ವಿರಕ್ತ ಮಠಾಧ್ಯಕ್ಷ ಚೆನ್ನಮಲ್ಲ ದೇಶಕೇಂದ್ರ ಸ್ವಾಮೀಜಿ ಹೇಳಿದರು.ಗ್ರಾಮದ ಜೆಎಸ್ಎಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ 109ನೇ ಜಯಂತಿ ಮಹೋತ್ಸವದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಬಗ್ಗೆ ಹೇಳುವುದೆಂದರೆ ಒಂದು ರೋಮಾಂಚನವಾಗುತ್ತದೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸಿವನ್ನು ನೀಗಿಸುವುದಕ್ಕಾಗಿ ತಾವು ಧರಿಸಿದ ಚಿನ್ನದ ಕಡಗವನ್ನು ಮಾರಿ ಸಂಸ್ಥೆಯನ್ನು ಕಟ್ಟಿದರು. ಗುರು ಪರಂಪರೆ ಎಲ್ಲರಿಗೂ ಜೀವನದ ನಾಡಿಮಿಡಿತ ಸಕಲ ಭಕ್ತರಿಗೂ ಲಭಿಸಲಿ ಹರಸಿದರು.ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳು ಎಂದರೆ ಅವರ ದೂರದೃಷ್ಟಿ ಹಿಮಾಲಯದಷ್ಟು ಎತ್ತರದ ವಿಶಾಲ ಹೃದಯವುಳ್ಳವರಾಗಿದ್ದರು. ಸಾಗರ ಎಷ್ಟು ವಿಶಾಲವಾಗಿ ಕಾಣುತ್ತೆ ಅಷ್ಟು ವಿಶಾಲವಾಗಿ ವಿದ್ಯಾಸಂಸ್ಥೆಗಳನ್ನು ರಾಜೇಂದ್ರ ಶ್ರೀಗಳು ಸ್ಥಾಪಿಸಿದರು. 9ನೇ ಶತಮಾನದಲ್ಲಿ ಅಕ್ಷರ ಹಾಗೂ ಅನ್ನ ಹಾಕಿದ ಎರಡು ಪದಗಳಿಗೆ ಅನ್ವರ್ಥ ಆಗುವುದು ಶ್ರೀಗಳಿಗೆ ಎಂದರು.
ರಾಜೇಂದ್ರ ಶ್ರೀಗಳ ಜೀವನ ಸಾಧನೆಗಳ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ನಿರ್ದೇಶಕ ಎಚ್.ಕೆ. ಚೆನ್ನಪ್ಪ ಉಪನ್ಯಾಸ ನೀಡಿದರು. ತಿರುಮಳ್ಳಿ ಮುರಗಿ ಸ್ವಾಮಿ ವಿರಕ್ತ ಮಠಾಧ್ಯಕ್ಷ ಇಮ್ಮಡಿ ಮುರುಗಿ ಸ್ವಾಮೀಜಿ, ಹುಲ್ಲಹಳ್ಳಿ ಗ್ರಾಪಂ ಉಪಾಧ್ಯಕ್ಷ ಲೋಕೇಶ್. ದುಗ್ಗಳ್ಳಿ ಗ್ರಾಪಂ ಅಧ್ಯಕ್ಷ ಶಿವ ನಾಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮಾದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಪೌರಾಣಿಕ ರಂಗಭೂಮಿ ಕಲಾವಿದ ಪಾರ್ವತಪ್ಪ, ಪರಮೇಶ್, ಮಹದೇವಸ್ವಾಮಿ, ಶಿವಕುಮಾರ್, ಮಲ್ಲಣ್ಣ. ಚಿನ್ನಸ್ವಾಮಿ, ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ರೇವಣ್ಣ, ಮಾದೇಗೌಡ, ವಿಜೇಂದ್ರ ಇದ್ದರು.ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಪುತ್ಥಳಿಕೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.