ಸಾರಾಂಶ
ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ತಾಲೂಕಾಡಳಿತ ವತಿಯಿಂದ ಅ. ೨೩ರಂದು ಈ ಬಾರಿ ಅದ್ಧೂರಿಯಾಗಿ ಆಚರಣೆಗೆ ನಿರ್ಧಾರ ಮಾಡಲಾಗಿದ್ದು, ಸಮಾಜದರು ಸಹಕಾರ ನೀಡಬೇಕು
ಕನ್ನಡಪ್ರಭ ವಾರ್ತೆ ಯಲಬುರ್ಗಾ
ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ತಾಲೂಕಾಡಳಿತ ವತಿಯಿಂದ ಅ. ೨೩ರಂದು ಈ ಬಾರಿ ಅದ್ಧೂರಿಯಾಗಿ ಆಚರಣೆಗೆ ನಿರ್ಧಾರ ಮಾಡಲಾಗಿದ್ದು, ಸಮಾಜದರು ಸಹಕಾರ ನೀಡಬೇಕು ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.ಪಟ್ಟಣದ ತಹಸೀಲ್ದಾರ ಸಭಾಂಗಣದಲ್ಲಿ ಬುಧವಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಚೆನ್ನಮ್ಮ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕಾಡಳಿತ ಹಾಗೂ ಪಂಚಮಸಾಲಿ ಸಮಾಜದ ವತಿಯಿಂದ ಅ.೨೩ರಂದು ಚೆನ್ನಮ್ಮ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು ಎಂದರು.
ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಪಟ್ಟಣದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅದ್ಧೂರಿ ಮೆರವಣಿಗೆ ನಡೆಯಲಿದೆ. ಎಲ್ಲ ಸರ್ಕಾರಿ ಕಚೇರಿಯಲ್ಲಿ ಚೆನ್ನಮ್ಮ ಜಯಂತಿ ಆಚರಿಸಬೇಕು. ಜತೆಗೆ ಜಯಂತಿ ದಿನದಂದು ತಾಲೂಕಾ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಕೆ.ಜಿ. ಪಲ್ಲೇದ ಮಾತನಾಡಿದರು.
ಈ ಸಂದರ್ಭ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ರೇವಣೆಪ್ಪ ಹಿರೇಕುರುಬರ, ಅಮರೇಶ ಹುಬ್ಬಳ್ಳಿ, ಗ್ರೇಡ್ ೨ ತಹಸೀಲ್ದಾರ ವ್ಹಿ.ಎಚ್. ಹೊರಪೇಟೆ, ಪಪಂ ಮುಖ್ಯಾಧಿಕಾರಿ ನಾಗೇಶ, ಮುಖಂಡರಾದ ಶರಣಪ್ಪ ಗಾಂಜಿ, ರಾಜಶೇಖರ ನಿಂಗೋಜಿ, ಸಿದ್ರಾಮೇಶ ಬೇಲೇರಿ, ಶರಣಪ್ಪ ರಾಂಪೂರ, ವೀರಣ್ಣ ಉಳ್ಳಾಗಡ್ಡಿ, ಎಸ್.ಎನ್. ಶ್ಯಾಗೋಟಿ, ಡಾ. ಶಿವನಗೌಡ ದಾನರೆಡ್ಡಿ, ಬಸವರಾಜ ಅಧಿಕಾರಿ, ಶರಣಪ್ಪ ಗೋಣಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.