ಸಾರಾಂಶ
ಮುಂಡರಗಿ: ಕೇವಲ ಪಂಚಮಸಾಲಿ ಸಮಾಜ ಬಾಂಧವರನ್ನಷ್ಟೇ ಅಲ್ಲದೇ ಎಲ್ಲ ಸಮಾಜದ ಮಹಿಳೆಯರನ್ನು ಕರೆದು ಉಡಿ ತಂಬಿ ಚೆನ್ನಮ್ಮನ ಪೋಟೊ ನೀಡುವ ಮೂಲಕ ಮುಂಡರಗಿಯಲ್ಲಿ ಪ್ರಾರಂಭವಾದ ಮನೆ ಮನದಲ್ಲಿ ಚೆನ್ನಮ್ಮ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದರು.
ಅವರು ಭಾನುವಾರ ಮುಂಡರಗಿ ಪಟ್ಟಣದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಅನ್ನಪೂರ್ಣಾ ರಜನಿಕಾಂತ ದೇಸಾಯಿ ನಿವಾಸದಲ್ಲಿ ವೀರಶೈವ ಪಂಚಮಸಾಲಿ ಸಂಘ ತಾಲೂಕು ಘಟಕ ಹಾಗೂ ಪಂಚಮಸಾಲಿ ಮಹಿಳಾ ಶಹರ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಮನೆ ಮನದಲ್ಲಿ ಚೆನ್ನಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.1994ರಿಂದ ನಾವು ಸಮಾಜದ ಸಂಘಟನೆ ಮಾಡುತ್ತಾ ಬಂದಿದ್ದು, ಅಂದಿನಿಂದ ನಾವು ನಮ್ಮ ಸಮಾಜದಲ್ಲಿರುವ ಬಡವರ ಮಕ್ಕಳ ಶಿಕ್ಷಣಕ್ಕಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೀಸಲಾತಿ ಪಡೆಯಲು ಉದ್ದೇಶಿಸಿದ್ದೇವು. 2012 ರಲ್ಲಿ 2ಎ ಮೀಸಲಾತಿಗಾಗಿ ನಮ್ಮ ಸಮಾಜದ ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜ ಸ್ವಾಮೀಜಿ ಬೆಳಗಾವಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಪ್ರಾರಂಭಿಸಿದರು. ಅಂದು ಪ್ರಾರಂಭವಾದ ಹೋರಾಟ ಇಂದಿನವರೆಗೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಮನೆ ಮನದಲ್ಲಿ ಚೆನ್ನಮ್ಮ ಕಾರ್ಯಕ್ರಮದ ಮೂಲಕ ಎಲ್ಲ ಜನತೆಗೆ ಚೆನ್ನಮ್ಮನ ಧೈರ್ಯ, ಶೌರ್ಯದ ಕುರಿತು ತಿಳಿಸಲು ಅನುಕೂಲವಾಗುತ್ತದೆ. ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.
ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, ಸಮಾಜದ ವತಿಯಿಂದ ರಾಜ್ಯಾದ್ಯಂತ ಮಾಡುತ್ತಿರುವ ಕಾರ್ಯಕ್ರಮ ಇದಾಗಿದ್ದು, ಚೆನ್ನಮ್ಮ ದೇಶಕ್ಕಾಗಿ ಹೋರಾಟ ಮಾಡಿದ್ದು, ಇಡೀ ದೇಶಕ್ಕಾಗಿ ಹೋರಾಟ ಮಾಡಿದ ದೇಶದ ಪ್ರಥಮ ಸ್ವಾತಂತ್ರ್ಯ ಮಹಿಳೆಯಾಗಿದ್ದು, ಅವರನ್ನು ಸ್ಮರಿಸುವ ಮೂಲಕ ಅವರ ತತ್ವಾದರ್ಶ ನಮ್ಮ ಸಮಾಜದ ಎಲ್ಲ ಮಹಿಳೆಯರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಮನೆ ಮನದಲ್ಲಿ ಚೆನ್ನಮ್ಮ ಕಾರ್ಯಕ್ರಮ ಪ್ರತಿವಾರ ಒಬ್ಬೊಬ್ಬರ ಮನೆಯಲ್ಲಿ ಆಯೋಜಿಸಲಾಗುವುದು. ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷ ಶೋಭಾ ಹೊಟ್ಟೀನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಹಾಲಪ್ಪ ದೇಸಾಯಿ, ದೇವಪ್ಪ ಕಂಬಳಿ, ಅಮಿನಸಾಬ್ ಬಿಸನಳ್ಳಿ, ವಿರೇಶ ಹಡಗಲಿ, ಪ್ರಮೋದ ಇನಾಮತಿ, ಶಂಬುಲಿಂಗನಗೌಡ ಹಕ್ಕಂಡಿ, ವೀರನಗೌಡ ಗುಡದಪ್ಪನವರ, ಬಸವರಾಜೇಶ್ವರಿ ಹಂದ್ರಾಳ, ಅನ್ನಪೂರ್ಣಾ ದೇಸಾಯಿ, ರಮೇಶಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಜಾತಾ ಹಕ್ಕಂಡಿ ಸ್ವಾಗತಿಸಿ, ಶೋಭಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಲಾವತಿ ಉಮಚಗಿ ನಿರೂಪಿಸಿ ಶ್ರೀದೇವಿ ಗೋಡಿ ವಂದಿಸಿದರು.