ಸಾರಾಂಶ
ಸಂಡೂರು: ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ, ಅವರಲ್ಲಿನ ದೇಶ ಪ್ರೇಮ, ತೋರಿದ ಧೈರ್ಯ ನಮಗೆಲ್ಲ ಆದರ್ಶವಾಗಿದೆ ಎಂದು ಸಂಸದ ಈ. ತುಕಾರಾಂ ಅಭಿಪ್ರಾಯಪಟ್ಟರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ೨೦೧ನೇ ವಿಜಯೋತ್ಸವ ಹಾಗೂ ೨೪೬ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮಿಬಾಯಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ಅವರ ತ್ಯಾಗ, ಬಲಿದಾನವನ್ನು ನಾವು ಸ್ಮರಿಸಬೇಕಿದೆ. ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಘಟಕದಿಂದ ಸಂಸದ ಈ. ತುಕಾರಾಂ, ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ, ಬೆಳಗಾವಿ ಅಧಿವೇಶದಲ್ಲಿ ೨ಎ ಮೀಸಲಾತಿಗಾಗಿ ಹೋರಾಟ ನಡೆಸಿದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಖಂಡನೀಯ. ಹೋರಾಟಗಾರರ ಮೇಲೆ ಹಾಕಿರುವ ಕೇಸನ್ನು ಹಿಂದಕ್ಕೆ ಪಡೆಯಬೇಕು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ಮೀಸಲಾತಿ ಪ್ರಮಾಣ ಶೇ.೫೦ ಮೀರಬಾರದು ಎಂಬ ನಿಯಮವಿದೆ. ಮೀಸಲಾತಿ ಕಲ್ಪಿಸುವಲ್ಲಿ ಕೆಲ ತಾಂತ್ರಿಕ ತೊಂದರೆಗಳಿವೆ. ಸಂವಿಧಾನದ ವ್ಯವಸ್ಥೆಯಲ್ಲಿ ಈ ಮಿತಿಯನ್ನು ೭೦ಕ್ಕೆ ಹೆಚ್ಚಿಸಬೇಕೆನ್ನುವ ಚಿಂತನೆ ಇದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ ಎಂದು ಭರವಸೆ ನೀಡಿದರು.ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ.ನಾಗನಗೌಡ, ಜಿಲ್ಲಾಧ್ಯಕ್ಷ ಬಪ್ಪಕಾನ್ ಕುಮಾರಸ್ವಾಮಿ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಿ.ರವಿಕುಮಾರ್, ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಗಡಾದ್ ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಅವರು ಕಿತ್ತೂರು ರಾಣಿ ಚೆನ್ನಮ್ಮಾಜಿ ಬ್ರಿಟೀಸರ ವಿರುದ್ಧ ನಡೆಸಿದ ಹೋರಾಟ, ಅವರ ಆದರ್ಶ, ದೇಶ ಪ್ರೇಮ ಕುರಿತು ವಿವರಿಸಿದರು.ಕಾರ್ಯಕ್ರಮದ ಪೂರ್ವದಲ್ಲಿ ಚೆನ್ನಮ್ಮನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಂದಿಕೋಲು, ಸಮಾಳ, ಕುಂಬ ಕಳಸಾರತಿ, ಡೋಳ್ಳು ಮುಂತಾದ ವಾದ್ಯಮೇಳದೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡಲಾಯಿತು. ನೂರಾರು ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಸಾಗಿದ್ದು, ಹಲವು ಬಾಲಕಿಯರು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಶಿಕ್ಷಕ ಜಿ.ಎಂ. ಪ್ರದೀಪ್ ಸ್ವಾಗತಿಸಿದರು. ಸಂಜನಾ ಬಣಕಾರ್ ಪ್ರಾರ್ಥಿಸಿದರೆ, ಬಣಕಾರ್ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಮೇಲುಸೀಮೆ ಶಂಕ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಜಿ. ಅರುಂಧತಿ, ಜಿಲ್ಲಾ ಪ್ರತಿನಿಧಿ ಎಚ್.ಕೆ. ಪರಿಮಳ, ವೃತ್ತ ನಿರೀಕ್ಷಕ ಬಿ. ಮಹೇಶ್‌ಗೌಡ, ಮುಖಂಡ ಬಿ.ಕೆ. ಬಸವರಾಜ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.