ಸಾರಾಂಶ
ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಬುಧವಾರ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಕಾಲೇಜಿನ ಕನ್ನಡ ಮತ್ತು ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ತಾಲೂಕು ಮಟ್ಟದ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ‘ಚೆನ್ನಿ ಮಣಿ-2025 ಎಲ್ಲಾ ಒಂದ್ ಗಳ್ಗಿ ಬನಿ’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಭಾಷಾಭಿಮಾನ ಹೆಚ್ಚಿಸುವ ಹಾಗೂ ಅಬ್ಬಿ ಭಾಷೆಯನ್ನು ಜಗದಗಲಕ್ಕೆ ವಿಸ್ತರಿಸುವ ಉದ್ದೇಶಗಳನ್ನು ಇರಿಸಿಕೊಂಡು ಕುಂದಾಪ್ರ ಕನ್ನಡ ಅಧ್ಯಯನ ಪೀಠ ವಿಭಿನ್ನವಾಗಿ ಕಾರ್ಯಾಚರಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಬುಧವಾರ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಕಾಲೇಜಿನ ಕನ್ನಡ ಮತ್ತು ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ತಾಲೂಕು ಮಟ್ಟದ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ‘ಚೆನ್ನಿ ಮಣಿ-2025 ಎಲ್ಲಾ ಒಂದ್ ಗಳ್ಗಿ ಬನಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ರಾಜು ಮೊಗವೀರ ಮಾತನಾಡಿ, ವ್ಯವಹಾರಿಕವಾಗಿ ಯಾವುದೇ ಭಾಷಾಭ್ಯಾಸ ಇದ್ದರೂ, ಉಳಿದ ಅವಧಿಯಲ್ಲಿ ಮಾತೃಭಾಷೆಯ ಬಳಕೆ ಮಾಡುವುದರಿಂದ ಭಾಷೆಯ ಅಭಿವೃದ್ಧಿಯಾಗುತ್ತದೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭದ ಚಟುವಟಿಕೆಗಳನ್ನು ನೋಡುವಾಗ, ಪೀಠ ನಿರೀಕ್ಷಿತ ಗುರಿ ಮುಟ್ಟುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಅನುಪಮಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿ, ಭಾಷೆ ಹಾಗೂ ಸಂಸ್ಕೃತಿ ಉಳಿಯಬೇಕಾದರೆ ಈ ರೀತಿಯ ಸಂವೇದನಾಶೀಲ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.ಹಾರ್ದಳ್ಳಿ ಮಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಡಾ.ಗಿರೀಶ್ ಎಂ. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಮಮತಾ ಇದ್ದರು.ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ರಾಘವೇಂದ್ರ ಶೆಟ್ಟಿ ಹಾಗೂ ಆಶಾ ನಿರೂಪಿಸಿದರು. ಸಂದೀಪ್ ವಂದಿಸಿದರು.