ಮಂಗಳೂರು: ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್ ಕೇಸುಗಳು ಬಹಳಷ್ಟು ಹೆಚ್ಚುತ್ತಿರುವುದರಿಂದ ಜು.18 ಮತ್ತು ನ.21 ರಂದು ವಿಶೇಷ ಲೋಕ ಅದಾಲತ್ ನಡೆಯಲಿದೆ ಎಂದು ಕಾಯಂ ಜನತಾ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಹೇಳಿದರು.

ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಪೊಲೀಸ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಸಮನ್ಸ್, ವಾರಂಟ್ ಜಾರಿಯಾಗುತ್ತಿರುವುದರಿಂದ ಪೊಲೀಸರ ಮೇಲೂ ಒತ್ತಡ ಬೀಳುತ್ತಿವೆ. ಇಂತಹ ಪ್ರಕರಣಗಳಲ್ಲಿ ದೂರುದಾರ ಮತ್ತು ಆರೋಪಿ ರಾಜಿಯಾಗಿ ಪ್ರಕರಣ ಮುಕ್ತಾಯಗೊಳಿಸಲು ಅವಕಾಶವಿದೆ. ಇದಕ್ಕಾಗಿ ಸಾರ್ವಜನಿಕರು ಆಯಾ ತಾಲೂಕು ನ್ಯಾಯಾಲಯಗಳನ್ನು ಸಂಪರ್ಕಿಸಬಹುದಾಗಿದೆ. ಇದರಿಂದ ಪ್ರಕರಣಗಳು ತ್ವರಿತವಾಗಿ ಮುಕ್ತಾಯಗೊಂಡು ಸಾರ್ವಜನಿಕರಿಗೆ ನೆಮ್ಮದಿ ಸಿಗಲಿದೆ ಎಂದರು.

ಟ್ರಾಫಿಕ್ ದಂಡ ರಿಯಾಯಿತಿ:

ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯಿತಿ ನೀಡಿರುವುದರಿಂದ ಸಾರ್ವಜನಿಕರು ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತಾಗಲು ಪೊಲೀಸ್ ಇಲಾಖೆ ಅರಿವು ಮೂಡಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಮಾತನಾಡಿ, ಪ್ರತಿ ವರ್ಷ 4 ರಾಷ್ಟ್ರೀಯ ಲೋಕ ಅದಾಲತ್ ನಡೆಯುತ್ತದೆ. ಎಲ್ಲ ನ್ಯಾಯಾಲಯಗಳಲ್ಲೂ ಲೋಕ ಅದಾಲತ್ ನಿರಂತರವಾಗಿ ಇರುತ್ತದೆ. ವಿವಾದಕ್ಕೆ ಸಂಬಂಧಿಸಿದ ಪಕ್ಷಗಳ ನಡುವೆ ರಾಜಿ ಅಥವಾ ಇತ್ಯರ್ಥವನ್ನು ನಿರ್ಧರಿಸುವ ಅಧಿಕಾರವನ್ನು ಲೋಕ ಅದಾಲತ್ ಹೊಂದಿರುತ್ತದೆ ಎಂದರು.

ವಿಶೇಷ ಲೋಕ ಅದಾಲತ್: ಆ.21, 22 ಮತ್ತು 23ರಂದು ಸುಪ್ರೀಂ ಕೋರ್ಟ್‍ನಲ್ಲಿ ‘ಸಮಾಧಾನ ಸಮಾರೋಹ್ -2026’ ಹೆಸರಿನಲ್ಲಿ ವಿಶೇಷ ಲೋಕ ಅದಾಲತ್ ಏರ್ಪಡಿಸಲಾಗಿದೆ. ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಾರ್ವಜನಿಕರು ತಾವಿದ್ದಲ್ಲಿಯೇ ರಾಜಿ ಸಂಧಾನ ಮಾಡಿಕೊಳ್ಳಲು ಇದರಲ್ಲಿ ಅವಕಾಶವಿದೆ ಎಂದರು.

ಕಾರ್ಮಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ವೀರನಗೌಡ ಪಾಟೀಲ್, ನಗರದ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್, ಎಸಿಪಿ ಗೀತಾ ಕುಲಕರ್ಣಿ, ವಿವಿಧ ಪೊಲೀಸ್ ಅಧಿಕಾರಿಗಳು ಇದ್ದರು.