ತಾಲೂಕಿನ ಹಲವಾರು ಹೈನುಗಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಹಲವು ಯೋಜನೆಗಳ ಅಡಿಯಲ್ಲಿ ಸುಮಾರು 13.60 ಲಕ್ಷ ರುಗಳ ಚೆಕ್ ನ್ನು ಕೆಎಂಎಫ್ ನ ಜಿಲ್ಲಾ ನಿರ್ದೇಶಕರಾದ ಸಿ.ವಿ.ಮಹಲಿಂಗಯ್ಯ ವಿತರಣೆ ಮಾಡಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಹಲವಾರು ಹೈನುಗಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಹಲವು ಯೋಜನೆಗಳ ಅಡಿಯಲ್ಲಿ ಸುಮಾರು 13.60 ಲಕ್ಷ ರುಗಳ ಚೆಕ್ ನ್ನು ಕೆಎಂಎಫ್ ನ ಜಿಲ್ಲಾ ನಿರ್ದೇಶಕರಾದ ಸಿ.ವಿ.ಮಹಲಿಂಗಯ್ಯ ವಿತರಣೆ ಮಾಡಿದರು.

ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಮಾರಂಭದಲ್ಲಿ ಅವರು ಚೆಕ್ ಗಳನ್ನು ವಿತರಣೆ ಮಾಡಿದರು. ರಾಸುಗಳ ವಿಮಾ ಯೋಜನೆಯಡಿ ಮೃತಪಟ್ಟ 14 ರಾಸುಗಳ ಮಾಲೀಕರಿಗೆ ಸುಮಾರು 80 ಸಾವಿರ ರುಗಳು, ಇಬ್ಬರು ಹೈನುಗಾರರು ಮೃತಪಟ್ಟ ಹಿನ್ನೆಲೆಯಲ್ಲಿ ತಲಾ 50 ಸಾವಿರದಂತೆ ಒಂದು ಲಕ್ಷ ರುಗಳು, ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಓರ್ವ ವಿದ್ಯಾರ್ಥಿಗೆ 10 ಸಾವಿರ ರುಗಳು, ಬೆಂಕಿಕೆರೆಯ ಕಟ್ಟಡ ನಿರ್ಮಾಣದ ಅನುದಾನ 4.50 ಲಕ್ಷ ರುಗಳ ಚೆಕ್ ನ್ನು ಅವರು ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಸಿ.ವಿ.ಮಹಲಿಂಗಯ್ಯ, ರೈತಾಪಿಗಳಿಗೆ ನಂದಿನಿ ಸಂಸ್ಥೆ ನೆರವಾದಷ್ಟು ಬೇರೆ ಯಾವ ಸಂಸ್ಥೆಗಳೂ ರೈತರ ನೆರವಿಗೆ ಬಂದಿಲ್ಲ. ನಮ್ಮಲ್ಲಿ ರೈತರ ನೆರವಿಗೆ ಬರಲು ನೂರಾರು ಯೋಜನೆಗಳು ಇವೆ. ಅಲ್ಲದೇ ಪ್ರತಿ ತಿಂಗಳೂ ತಪ್ಪದೇ ಹಾಲಿನ ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ತಮ್ಮ ಮಕ್ಕಳ ವಿದ್ಯಾಭ್ಯಾಸ, ರಾಸುಗಳ ವಿಮೆ, ಹೈನುಗಾರರಿಗೆ ವಿಮೆ ಸೇರಿದಂತೆ ವಿವಿಧ ಯೋಜನೆಗಳು ಇರುವುದರಿಂದ ರಾಜ್ಯ ಅಂತರ ರಾಜ್ಯದಲ್ಲೂ ನಂದಿನಿ ಸಂಸ್ಥೆಯ ಮೇಲೆ ರೈತರಿಗೆ ನಂಬಿಕೆ ಇದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಮುಖ್ಯಸ್ಥ ಮಂಜುನಾಥ್, ವಿಸ್ತರಣಾಧಿಕಾರಿಗಳಾದ ದಿವಾಕರ್, ಕಿರಣ್, ಸುನಿಲ್ ಸೇರಿದಂತೆ ಇತರರು ಇದ್ದರು.