ನಾಪೋಕ್ಲು: ಅಗಲಿದ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ಭಾವಪೂರ್ಣ ಗೀತ ನಮನ ಕಾರ್ಯಕ್ರಮ ಗುರುವಾರ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಚೇರಂಬಾಣೆ ಗೌಡ ಸಮಾಜದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅವರು ಎಸ್. ಜಾನಕಿ ಅವರ ಬದುಕಿನ ಪಯಣದ ಕುರಿತು ಮಾತನಾಡಿ, 48 ಸಾವಿರ ಹಾಡುಗಳಿಗೆ ಭಾವನೆಯ ಜೀವ ತುಂಬುವ ಮೂಲಕ 17 ಭಾಷೆಯ ಸಂಗೀತದ ಒಡತಿ ಎಂದೆನಿಸಿಕೊಂಡು ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ಎಸ್. ಜಾನಕಿಯವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು. ಜಾನಕಿ ಅವರ ಹಾಡುಗಳ ಸಾಲುಗಳಲ್ಲಿ ಕವನ ಹೆಣೆದು ಅಗಲಿದ ಚೇತನಕ್ಕೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಲಾಯಿತು.ಮಹಿಳಾ ಒಕ್ಕೂಟದ ಸದಸ್ಯರು, ಯುವ ವೇದಿಕೆ ಸದಸ್ಯರು ಒಟ್ಟಾಗಿ ‘ಆಕಾಶ ದೀಪವು ನೀನೆ’ ಗೀತೆ ಹಾಡಿ ಗೀತ ನಮನ ಸಲ್ಲಿಸಿದರು. ಸದಸ್ಯರಾದ ಬೈಮನ ಜ್ಯೋತಿ ತಿಮ್ಮಯ್ಯ, ಕಾಂತಿ ದಯಾನಂದ, ಭವಾನಿ ದಿಲೀಪ್, ಕಡ್ಯದ ಸ್ಮಿತಾ ಜೀವನ್ ಅವರು ಎಸ್. ಜಾನಕಿ ಅವರ ಗೀತೆಗಳಿಗೆ ದನಿಯಾದರು.

ಕಾರುಗುಂದ ಗೌಡ ಯುವ ವೇದಿಕೆ ಉಪಾಧ್ಯಕ್ಷ ದಾಯನ ಪುರ್ಶಿನ್, ಕಾರ್ಯದರ್ಶಿ ಕೇಟೋಳಿ ಯಶ್ವಂತ್ ಮತ್ತಿತರರಿದ್ದರು. ಕೂಡಕಂಡಿ ಸೋನಿ ಸ್ವಾಗತಿಸಿ, ಕೇಕಡ ಪೂಜಾ ನಾಗೇಂದ್ರ ನಿರೂಪಿಸಿ, ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಪಾರೆಮಜಲು ವಂದಿಸಿದರು.