ಸಾರಾಂಶ
ಕೆರೆ ತುಂಬಿಸುವ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಮುಂದುವರೆದಿದೆ. ಸಿಎಂ ಒತ್ತಿದ ಉದ್ಘಾಟನಾ ಗುಂಡಿ ‘ಆನ್’ ಆಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಶ್ರೀಧರ್ ಅವರನ್ನು ಅಮಾನತುಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಕೆರೆ ತುಂಬಿಸುವ ಕಾರ್ಯಕ್ರಮದ ‘ಉದ್ಘಾಟನಾ ಬಟನ್’ ಆನ್ ಆಗದ ಪ್ರಸಂಗಕ್ಕೆ ಸಂಬಂಧಿಸಿದಂತೆ, ನಿರ್ಲಕ್ಷ್ಯ ತೋರಿದ ಆರೋಪ ಹೊರಿಸಿ ಮೈಸೂರಿನ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಲಾಖೆ ವಿಚಾರಣೆಯನ್ನು ಬಾಕಿ ಇಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಮತ್ತು ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಟನ್ ಒತ್ತಿ ಯೋಜನೆ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ, ಬಟನ್ ಚಾಲನೆಯಾಗಲಿಲ್ಲ. ಇದು ಸರ್ಕಾರವನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.==
ಕಾರ್ಯಕ್ರಮದಲ್ಲಿ ಖುದ್ದು ಹಾಜರಿರಬೇಕಿತ್ತು. ಯಾವುದೇ ಲೋಪದೋಷ ಇಲ್ಲದಂತೆ ಎಚ್ಚರಿಕೆ ವಹಿಸಬೇಕಿತ್ತು. ಆದರೆ, ಶ್ರೀಧರ್ ಅವರು ಹಾಜರಿರಲಿಲ್ಲ. ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದಾಗ ಚಾಲನೆಯಾಗದಿದ್ದಾಗ ಮಾಧ್ಯಮ, ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಯಿತು. ಹೀಗಾಗಿ ಕರ್ತವ್ಯಲೋಪ ಎಸಗಿರುವ ಕಾರಣ ಶ್ರೀಧರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.