ಚೆಸ್ ಕ್ರೀಡೆಯು ಬುದ್ಧಿಶಕ್ತಿ ಹೆಚ್ಚಿಸುವ ಜೊತೆಯಲ್ಲಿ ಜೀವನದಲ್ಲಿ ಬರುವ ಸವಾಲು ಎದುರಿಸಲು ಬೇಕಾಗುವ ನೈಪುಣ್ಯ, ಚಾಕಚಕ್ಯತೆಯನ್ನು ಒದಗಿಸುತ್ತದೆ.

ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಚೆಸ್ ಕ್ರೀಡೆಯು ಬುದ್ಧಿಶಕ್ತಿ ಹೆಚ್ಚಿಸುವ ಜೊತೆಯಲ್ಲಿ ಜೀವನದಲ್ಲಿ ಬರುವ ಸವಾಲು ಎದುರಿಸಲು ಬೇಕಾಗುವ ನೈಪುಣ್ಯ, ಚಾಕಚಕ್ಯತೆಯನ್ನು ಒದಗಿಸುತ್ತದೆ. ಚೆಸ್ ಬುದ್ಧಿಶಕ್ತಿ ಪ್ರಖರಗೊಳಿಸುವ ಉನ್ನತಮಟ್ಟದ ಕ್ರೀಡೆಯಾಗಿದೆ ಎಂದು ಬಿಸಿಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲೋಹಿತ ನೆಲವಿಗಿ ಹೇಳಿದರು.

ಭಾನುವಾರ ಪಟ್ಟಣದ ಶಂಕರಭಾರತಿ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್‌ ವತಿಯಿಂದ ಬಾಲಕ, ಬಾಲಕಿ ಹಾಗೂ ಹಿರಿಯರಿಗಾಗಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಕ್ರೀಡೆಯಲ್ಲಿ ಆಸಕ್ತಿ ಹುಟ್ಟಿಸಲು ಪಾಲಕರು ಮುಂದಾಗಬೇಕು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂಥ ಕ್ರೀಡೆಗಳಿಗೆ ತರಬೇತಿ ಮತ್ತು ಅವಕಾಶ ನೀಡುತ್ತಿರುವ ಕಾರ್ಯವನ್ನು ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್‌ದಿಂದ ಮಾಡಲಾಗುತ್ತಿರುವುದು ಉತ್ತಮ ಸಂಗತಿಯಾಗಿದೆ. ಅದಕ್ಕೆ ಸದಾ ಸಹಕಾರ ನೀಡುವುದಾಗಿ ಹೇಳಿದರು.

ರಾಷ್ಟ್ರೀಯ ಚೆಸ್‌ ಪಟು ಹಾಗೂ ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಬಳಿಗಾರ ಮಾತನಾಡಿ, ಕಳೆದ ೧೫-೨೦ ವರ್ಷಗಳಿಂದ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ಅಸ್ತಿತ್ವದಲ್ಲಿ ಇದ್ದು, ಇದುವರೆಗೆ ನೂರಾರು ಚೆಸ್ ಕ್ರೀಡಾಪಟುಗಳನ್ನು ತರಬೇತಿ ಮಾಡಿದ ಕೀರ್ತಿಗೆ ಭಾಜನವಾಗಿದ್ದು ಶ್ಲಾಘನೀಯ. ಇದೇ ರೀತಿ ಚೆಸ್‌ಗೆ ಹೆಚ್ಚಿನ ಮಹತ್ವ ನೀಡಬೇಕು, ಅಲ್ಲದೆ ಇದೀಗ ಚೆಸ್ ತರಬೇತಿ ಕೇಂದ್ರವನ್ನು ಹಾಗೂ ಜಿಲ್ಲಾ ಕಚೇರಿಯನ್ನು ಸಹ ಉದ್ಘಾಟಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಗಿರೀಶ ಅಗಡಿ ಮತ್ತು ಗದಗ ಜಿಲ್ಲಾ ಚೆಸ್ ಅಸೋಷಿಯೇಷನ್ ಸಂಘದ ಗೌರವಾಧ್ಯಕ್ಷ ರಾಮರಾವ್ ವೇರ್ಣೆಕರ ಮಾತನಾಡಿದರು.

ಈ ಸಂದರ್ಭ ಅಂತಾರಾಷ್ಟ್ರೀಯ ಚೆಸ್ ಪಟು ವಿನಯ ಕುರ್ತಕೋಟಿ, ಅಸೋಸಿಯೇಷನ್‌ನ ಗೌರವಾಧ್ಯಕ್ಷ ಬಾಬಣ್ಣ ವೇರ್ಣೆಕರ, ದಿಗಂಬರ ಪೂಜಾರ ಶ್ರೀಕಾಂತ ಪೂಜಾರ, ಎಂ.ಐ. ಕಣಕೆ, ಆದೇಶ ಹುಲಗೂರ, ಮಂಜುನಾಥ ಅಂಗಡಿ, ಎಸ್.ಎಂ. ಉಮ್ಮಣ್ಣವರ, ಚಂದ್ರಶೇಖರ ದೊಡ್ಡಮನಿ, ಎ.ಜೆ. ಬೂದಿಹಾಳ ಮತ್ತಿತರರು ಇದ್ದರು. ಆದೇಶ ಹುಲಗೂರ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಅಮೇರಿಕದಲ್ಲಿ ವಿಶ್ವ ಚೆಸ್ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಚೆಸ್‌ಪಟು ಹೊನ್ನಾವರದ ಸಮರ್ಥ ಜಗದೀಶರಾವ್ ಭಾಗವಹಿಸಿ ವಿಜೇತರಾಗಿದ್ದು ಎಲ್ಲರ ಗಮನ ಸೆಳೆಯಿತು. ಗದಗ, ಹಾವೇರಿ, ಧಾರವಾಡ ಸೇರಿ ವಿವಿಧ ಜಿಲ್ಲೆಗಳಿಂದ ನೂರಾರು ಚೆಸ್‌ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.