ಸಾರಾಂಶ
ಚಿತ್ರದುರ್ಗ: ಎಸ್‌ಜೆಎಂ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯ ಹುಬ್ಬಳ್ಳಿ ಸಹಯೋಗದೊಂದಿಗೆ ನಡೆದ ಅಂತರ ಮಹಾವಿದ್ಯಾಲಯ ಪುರುಷ ಹಾಗೂ ಮಹಿಳಾ ಚೆಸ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಹುಬ್ಬಳ್ಳಿ ಕಾನೂನು ಕಾಲೇಜು ಪ್ರಥಮ, ಎಂ.ಎಸ್.ರಾಮಯ್ಯ ಕಾನೂನು ಕಾಲೇಜು ದ್ವಿತೀಯ, ಅಂಜುಮನ್ ಕಾನೂನು ಕಾಲೇಜು ತೃತೀಯ ಸ್ಥಾನ ಪಡೆದಿದೆ.
ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಬಸವಪ್ರಭು ಸ್ವಾಮೀಜಿ, ಕ್ರೀಡಾಕೂಟಕ್ಕೆ ಬೀದರ್ ನಿಂದ ಹಿಡಿದು ಚಾಮರಾಜನಗರದವರೆಗೆ ಇರುವ ಕಾನೂನು ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು. ಅನೇಕ ಕ್ರೀಡೆಗಳು ದೈಹಿಕವಾದ ಚಟುವಟಿಕೆಯನ್ನು ನೀಡಿದರೆ ಚದುರಂಗವು ಮನಸ್ಸಿಗೆ ಮತ್ತು ಮೆದುಳಿಗೆ ಚುರುಕನ್ನು ನೀಡುವ ಆಟವಾಗಿದೆ. ಯಾರು ಬುದ್ಧಿಯನ್ನು ಚುರುಕಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಾರೋ ಅವರು ಚೆಸ್ ಆಟ ಆಡಬೇಕು ಎಂದರು.ಎಸ್.ಜೆ ಎಂ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ಮಾತನಾಡಿ, ಕ್ರೀಡೆ ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯ ನೀಡುತ್ತದೆ. ಹಿಂದಿನ ಕಾಲದ ಆಟಗಳು ಬೇರೆ ರೀತಿ ಇದ್ದವು. ಈಗಿನ ಕಾಲದ ಆಟಗಳೇ ಬೇರೆಯಾಗಿವೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾಮನೋಭಾವನೆ ಹೆಚ್ಚಾಗುತ್ತದೆ. ಸೋಲು ಗೆಲುವು ಸಾಮಾನ್ಯ. ಭಾಗವಹಿಸುವುದು ಮುಖ್ಯ ಎಂದರು .
ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ದಿನೇಶ್ ಮಾತನಾಡಿ, ಎಲ್ಲ ಕಾನೂನು ಮಹಾವಿದ್ಯಾಲಯಗಳಿಗೆ ಆಮಂತ್ರಣ ನೀಡಿದ್ದರ ಪರಿಣಾಮ 73 ಪುರುಷ ಹಾಗೂ 19 ಮಹಿಳಾ ತಂಡಗಳು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಆಫ್ ಲಾ ಪ್ರಥಮ, ವಿವೇಕಾನಂದಕಾನೂನು ಕಾಲೇಜು ಪುತ್ತೂರು ದ್ವಿತೀಯ, ಕರ್ನಾಟಕ ರಾಜ್ಯ ಕಾನೂನು ಶಾಲೆ ಹುಬ್ಬಳ್ಳಿ ತೃತೀಯ ಹಾಗೂ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜು ನಾಲ್ಕನೇ ಸ್ಥಾನ ಪಡೆಯಿತು.ಕಾಲೇಜಿನ ಸಹಪ್ರಾಧ್ಯಾಪಕಿ ಸುಮನ.ಎಸ್ ಅಂಗಡಿ, ವಕೀಲ ಉಮೇಶ್, ಸಹ ಪ್ರಾಧ್ಯಾಪಕರುಗಳಾದ ಕರಕಪ್ಪ, ರೂಪ, ಗಿರೀಶ್. ಸ್ಮಿತಾ, ಕಾಲೇಜಿನ ದೈಹಿಕ ನಿರ್ದೇಶಕ ಡಾ. ಕುಮಾರಸ್ವಾಮಿ ಇದ್ದರು.