ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮೇಲ್ದರ್ಜೆಗೆ

| Published : Feb 08 2024, 01:31 AM IST

ಸಾರಾಂಶ

ಕೇಂದ್ರ ಕೃಷಿ ಸಚಿವರಿಗೆ ಈಗಾಗಲೇ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಕೃಷಿ ಸಚಿವರು ಕೂಡ ಇದಕ್ಕೆ ಸಕರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಕಿತ್ತಳೆ ಸಂಶೋಧನಾ ಕೇಂದ್ರವಾಗಿ ಸ್ಥಾಪನೆಯಾಗಿ ಇದೀಗ ಬಟರ್ ಫ್ರೂಟ್, ಮಾಡಹಾಲಗಕಾಯಿ, ರಾಂಬೂಟಾನ್ ಸೇರಿ ವಿವಿಧ ಗಿಡಗಳನ್ನು ದೇಶದಾದ್ಯಂತ ವಿತರಿಸುತ್ತಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಮೇಲ್ದರ್ಜೆಗೇರಲಿದೆ.

ಇಲ್ಲಿನ ಕೇಂದ್ರದಲ್ಲಿಯೇ ಎಂಟು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆದು ಇಲ್ಲಿಯೇ ಪ್ರಾಯೋಗಿಕವಾಗಿ ಅಧ್ಯಯನ ನಡೆಸಿ ಅದನ್ನು ಅಭಿವೃದ್ಧಿ ಪಡಿಸಿ ಇಲ್ಲಿನ ರೈತರಿಗೆ ಗಿಡಗಳನ್ನು ವಿತರಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೇಂದ್ರ ಕೃಷಿ ಸಚಿವರಿಗೆ ಈಗಾಗಲೇ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೇಂದ್ರ ಕೃಷಿ ಸಚಿವರು ಕೂಡ ಇದಕ್ಕೆ ಸಕರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಆದಷ್ಟು ಬೇಗ ಈ ಕೇಂದ್ರ ಮೇಲ್ದರ್ಜೆಗೇರಿದ್ದಲ್ಲಿ ಇಲ್ಲಿ ಮ್ಯಾಂಗೋಸ್ಟಿನ್, ಬಟರ್ ಫ್ರೂಟ್, ರಾಂಬೂಟಾನ್, ಧುರಿಯನ್, ಪ್ಯಾಷನ್ ಫ್ರೂಟ್, ಬ್ಲೂಬೆರಿ ಸೇರಿದಂತೆ ವಿವಿಧ ಹಣ್ಣುಗಳ ಬಗ್ಗೆ ಅಧ್ಯಯನ ನಡೆಸಿ ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳುವಂತೆ ಕೇಂದ್ರದಿಂದ ತಳಿ ಅಭಿವೃದ್ಧಿ ಪಡಿಸಿದ ಗಿಡಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತದೆ.

ಮೂಲ ಸೌಕರ್ಯಗಳ ಅಭಿವೃದ್ಧಿ: ಇತ್ತೀಚಿನ ದಿನಗಳಲ್ಲಿ ವಿದೇಶಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಕೇಂದ್ರದಲ್ಲಿ ವಿದೇಶಿ ಹಣ್ಣುಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಚಿಂತಿಸಲಾಗಿದೆ. ವಿವಿಧ ಹಣ್ಣಿನ ವಿಭಾಗದೊಂದಿಗೆ ಲ್ಯಾಬ್ ಗಳು, ವಿಜ್ಞಾನಿಗಳು ಸೇರಿದಂತೆ ಅಗತ್ಯ ಸೌಕರ್ಯಗಳು ಕೇಂದ್ರದಲ್ಲಿ ಆಗಲಿದೆ.

ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಯೋಗ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರವಾಗಿದೆ. ಅಂದು ಕೊಡಗಿನ ಕಿತ್ತಳೆ ಅವನತಿಯ ಸಮಸ್ಯೆಯನ್ನು ಅಧ್ಯಯನ ಮಾಡಲು ಕೇಂದ್ರವನ್ನು 1947 ರಲ್ಲಿ ಕಿತ್ತಳೆ ಸಂಶೋಧನಾ ಕೇಂದ್ರವಾಗಿ ಪ್ರಾರಂಭಿಸಲಾಯಿತು.

ನಂತರ, ಸಂಗ್ರಹಿಸಿದ ಇತರ ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಹಣ್ಣುಗಳ ಮೌಲ್ಯಮಾಪನ ಮತ್ತು ರೂಪಾಂತರ ಪ್ರಯೋಗಗಳನ್ನು ನಡೆಸಲು 1957 ರಲ್ಲಿ ಕೊಡಗಿನ ಹಣ್ಣಿನ ಸಂಶೋಧನಾ ಕೇಂದ್ರವಾಗಿ ಮರುವಿನ್ಯಾಸಗೊಳಿಸಲಾಯಿತು. 1960 ರಲ್ಲಿ ಐಸಿಎಆರ್‌ನಿಂದ ಧನಸಹಾಯ ಪಡೆದ ದೇಶದಲ್ಲಿ ಆರು ಪ್ರಾದೇಶಿಕ ಹಣ್ಣು ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿ ನವೀಕರಿಸಲ್ಪಟ್ಟಿತು.

ನಂತರ, ಪ್ರದೇಶಕ್ಕೆ ನಿರ್ದಿಷ್ಟವಾದ ತೋಟಗಾರಿಕಾ ಸಂಶೋಧನೆಯ ಎಲ್ಲ ಅಂಶಗಳ ಕೆಲಸವನ್ನು ತೀವ್ರಗೊಳಿಸಲು 1972, ಫೆಬ್ರವರಿ 1ರಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಕೇಂದ್ರವು 92 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ತೋಟಗಾರಿಕೆ ಮತ್ತು ಮಣ್ಣು ವಿಜ್ಞಾನದ ನಾಲ್ಕು ಸಂಶೋಧನಾ ಪ್ರಯೋಗಾಲಯಗಳು, ಅಣಬೆ ಕೃಷಿ ಘಟಕ, ವರ್ಮಕಾಂಪೋಸ್ಟಿಂಗ್ ಘಟಕ, ಗ್ರಂಥಾಲಯ ಮತ್ತು ಆಡಳಿತ ವಿಭಾಗವು ಕೇಂದ್ರದಲ್ಲಿದೆ. ಕೇಂದ್ರದ ಕಡ್ಡಾಯ ಬೆಳೆ ಕೊಡಗಿನ ಕಿತ್ತಳೆ ಆಗಿತ್ತು. ಆದರೆ ಇದೀಗ ಬಟರ್ ಫ್ರೂಟ್, ರಾಂಬುಟಾನ್, ಲಿಚಿ, ಮ್ಯಾಂಗೋಸ್ಟೀನ್ ಹಣ್ಣುಗಳ ಮೇಲೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ನಿಜವಾದ ರೀತಿಯ ರೋಗ ಮುಕ್ತ ಸಿಟ್ರಸ್ ಮತ್ತು ಇತರ ನೆಟ್ಟ ವಸ್ತುಗಳ ಉತ್ಪಾದನೆ ಮತ್ತು ವಿತರಣೆಗಾಗಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ ನರ್ಸರಿ ಘಟಕವನ್ನು ಹೊಂದಿದೆ. ಟ್ರೈಕೋಡರ್ಮಾ ಹಾರ್ಜಿಯಾನಮ್ ಕಲ್ಚರ್ಸ್, ಆಯ್ಸ್ಟರ್ ಮಶ್ರೂಮ್ ಸ್ಪಾನ್ ಮತ್ತು ಫ್ರೂಟ್ ಫ್ಲೈ ಟ್ರ‍್ಯಾಪ್‌ಗಳನ್ನು ರೈತರಿಗೆ ಸರಬರಾಜು ಮಾಡಲಾಗುತ್ತದೆ ಮತ್ತು ಮಣ್ಣು ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ. ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ) ಮತ್ತು ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಯೋಜನೆಗಳ ಅಡಿಯಲ್ಲಿ ತಂತ್ರಜ್ಞಾನ ವರ್ಗಾವಣೆಯನ್ನು ಕೇಂದ್ರದಿಂದ ತೆಗೆದುಕೊಳ್ಳಲಾಗುತ್ತಿದೆ. ಕೊಡಗಿನ ಕಿತ್ತಳೆ, ರಾಂಬುಟಾನ್, ಮ್ಯಾಂಗೋಸ್ಟೀನ್, ಕೋಕಮ್, ಮಲಬಾರ್ ಹುಣಸೆಹಣ್ಣು, ಗಾರ್ಸಿನಿಯಾ ಜಾತಿಗಳು, ಆವಕಾಡೊ, ಪ್ಯಾಶನ್ ಹಣ್ಣು, ಲಿಚಿ, ಲಾಂಗನ್, ಕರಿಮೆಣಸು, ಗುಲಾಬಿ ಸೇರಿದಂತೆ ತೋಟಗಾರಿಕಾ ಬೆಳೆಗಳ 1200 ಕ್ಕೂ ಹೆಚ್ಚು ತಾಯಿ ಮರಗಳ ಸಂಗ್ರಹಗಳನ್ನು ಹೊಂದಿದೆ.ಬಟರ್‌ಫ್ರೂಟ್‌ಗೆ ಭಾರಿ ಬೇಡಿಕೆ- ಚೆಟ್ಟಳ್ಳಿ ಕೇಂದ್ರದಲ್ಲಿ ಸದ್ಯ ಬಟರ್‌ಫ್ರೂಟ್ ಗಿಡಗಳಿಗೆ ಭಾರಿ ಬೇಡಿಕೆಯಿದೆ. ಕೇಂದ್ರದಿಂದ ಅರ್ಕಾ ಸುಪ್ರಿಂ, ಅರ್ಕಾ ಕೂರ್ಗ್ ತಳಿಯನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದ್ದು, ವರ್ಷಕ್ಕೆ ಲಕ್ಷಾಂತರ ಗಿಡಗಳನ್ನು ಉತ್ಪತ್ತಿ ಮಾಡಿ ನೀಡಲಾಗುತ್ತಿದೆ. ಈ ಗಿಡಗಳಿಂದಲೇ ಕೇಂದ್ರಕ್ಕೆ ಕೋಟ್ಯಂತರ ರುಪಾಯಿ ಆದಾಯ ಲಭಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ ಕೇರಳ ಸೇರಿದಂತೆ ಹಲವು ಕಡೆಗಳಿಂದ ಇಲ್ಲಿನ ಗಿಡಗಳನ್ನು ತೆಗೆದುಕೊಂಡು ಹೋಗಿ ನಾಟಿ ಮಾಡುವ ಮೂಲಕ ಬೆಣ್ಣೆಹಣ್ಣಿನ ಕೃಷಿ ಹೆಚ್ಚಳವಾಗುತ್ತಿದೆ. ಇದಲ್ಲದೆ ಕೇಂದ್ರದಲ್ಲಿ ಕೊಡಗಿನ ಕಿತ್ತಳೆ, ಅರ್ಕಾ ಭರತ್ ಮಾಡಹಾಗಲ, ಅರ್ಕಾ ಕೂರ್ಗ್ ಎಕ್ಸೆಲ್ ಕಾಳು ಮೆಣಸು, ಅರ್ಕಾ ಕೂರ್ಗ್ ಅರಣ್ ರಾಂಬುಟಾನ್, ಅರ್ಕಾ ಕೂರ್ಗ್ ಪೀತಬ್, ಅರ್ಕಾ ಕೂಗ್ ಕಾವೇರಿ ಫ್ಯಾಷನ್ ಫ್ರೂಟ್, ಅರ್ಕಾ ಹನಿ ಡ್ಯೂ ಪಪ್ಪಾಯಿ ಸೇರಿದಂತೆ ಹಲವು ಗಿಡಗಳನ್ನು ಇಲ್ಲಿ ವಿತರಿಸಲಾಗುತ್ತದೆ. ಚೆಟ್ಟಳ್ಳಿ ತೋಟಗಾರಿಕಾ ಪ್ರಯೋಗಿಕ ಕೇಂದ್ರ ಮುಖ್ಯವಾಗಿ ವಿವಿಧ ಹಣ್ಣಿನ ಬಗ್ಗೆ ಅಧ್ಯಯನ ನಡೆಸಿ ತಳಿ ಅಭಿವೃದ್ಧಿ ಪಡಿಸಿ ರೈತರಿಗೆ ಗಿಡಗಳನ್ನು ವಿತರಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಕೃಷಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಂಟು ಜಾತಿಯ ವಿದೇಶಿ ಹಣ್ಣುಗಳನ್ನು ಬೆಳೆದು, ಇಲ್ಲಿಯೇ ಅಭಿವೃದ್ಧಿ ಪಡಿಸಿ ರೈತರಿಗೆ ಗಿಡಗಳನ್ನು ವಿತರಿಸಲಾಗುವುದು ಎಂದು ಐಐಎಚ್‌ಆರ್ ಬೆಂಗಳೂರು ಹಣ್ಣಿನ ವಿಭಾಗ ಮುಖ್ಯಸ್ಥರಾದ ಡಾ.ಎಂ. ಶಂಕರನ್ ಹೇಳುತ್ತಾರೆ.