ಸಾರಾಂಶ
ಹುಬ್ಬಳ್ಳಿ:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಸೋಲುಂಡಿದ್ದ ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಅವರಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಹುಮ್ಮಸ್ಸು ಮೂಡಿದೆ. ಈಗಿನಿಂದಲೇ ಮುಂದಿನ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಲು ಕಲಘಟಗಿ ಕ್ಷೇತ್ರದಲ್ಲೇ ಮನೆ ಮಾಡಲು ಮುಂದಾಗಿದ್ದಾರೆ.ಕಲಘಟಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ದಾಸ್ತಿಕೊಪ್ಪದಿಂದ ರಾಮನಾಳಕ್ಕೆ ತೆರಳುವ ರಸ್ತೆ ಪಕ್ಕದಲ್ಲಿ ಸ್ವಂತ ಮನೆ ಮತ್ತು ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ನಾಳೆ (ಭಾನುವಾರ) ಭೂಮಿಪೂಜೆ ನೆರವೇರಿಸಲಿದ್ದಾರೆ.
ಇದಕ್ಕೆಲ್ಲ ಕಾರಣ ಈ ಲೋಕಸಭಾ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಹೊಣೆ ಹೊತ್ತಿದ್ದ ಸಂತೋಷ ಲಾಡ್ ಅವರನ್ನು ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿಕ್ಕಿ ಬಜೆಪಿಗೆ ಭಾರೀ ಲೀಡ್ ಕೊಡಿಸಿರುವುದು. ಅಕ್ಷರಶಃ ತಮ್ಮ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ ನಾಗರಾಜ ಛಬ್ಬಿ.ಕಲಘಟಗಿ ಛಬ್ಬಿ ಕನಸು:
ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮೊದಲು ಕಾಂಗ್ರೆಸ್ಸಿನಲ್ಲಿದ್ದವರು. 2008ರಿಂದಲೇ ಕಲಘಟಗಿ ಕ್ಷೇತ್ರದ ಮೇಲೆ ಕಣ್ಣಿಟ್ಟವರು. ಆದರೆ ಆಗ ಬಳ್ಳಾರಿಯಿಂದ ಬಂದ ಸಂತೋಷ ಲಾಡ್‌ಗೆ ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಮುಂದೆ 2 ಚುನಾವಣೆಯಲ್ಲಿ ಲಾಡ್ ಗೆಲುವು ಕಂಡಿದ್ದರು. 2018ರ ಚುನಾವಣೆಯಲ್ಲಿ ಲಾಡ್, ಬಿಜೆಪಿಯ ಸಿ.ಎಂ. ನಿಂಬಣ್ಣವರ ಎದುರು ಪರಾಭವಗೊಂಡಿದ್ದರು. ಆಗ ಮತ್ತೆ ಈ ಕ್ಷೇತ್ರದತ್ತ ಕಣ್ಣು ಹಾಕಿದ ಛಬ್ಬಿ, ಕ್ಷೇತ್ರದಲ್ಲಿ ಓಡಾಡಲು ಶುರು ಮಾಡಿದರು. ಗ್ರಾಮ ವಾಸ್ತವ್ಯ ಮಾಡಿದ್ದರು. ಕೊರೋನಾ ಸಮಯದಲ್ಲಿ ರೈತರ ಬೆಳೆಗಳನ್ನು ಖರೀದಿಸಿ ಬಡವರಿಗೆ ಹಂಚಿದ್ದರು. ಈ ಮೂಲಕ ಕ್ಷೇತ್ರದ ಜನರ ಹತ್ತಿರವಾಗಿದ್ದರು.ಆದರೆ, 2023ರಲ್ಲಿ ಕೊನೆವರೆಗೂ ಲಾಬಿ ನಡೆಸಿದರೂ ಕಾಂಗ್ರೆಸ್ ಟಿಕೆಟ್ ಮಾತ್ರ ಛಬ್ಬಿಗೆ ಸಿಗಲಿಲ್ಲ. ಟಿಕೆಟ್ ಪಡೆಯುವಲ್ಲಿ ಲಾಡ್ ಯಶಸ್ವಿಯಾಗಿದ್ದರು. ಇದರಿಂದ ಮುನಿಸಿಕೊಂಡು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಟಿಕೆಟ್ ಪಡೆದಿದ್ದ ಛಬ್ಬಿ, ಲಾಡ್ ಎದುರು ಸ್ಪರ್ಧಿಸಿದ್ದರು. ಲಾಡ್ ಅಬ್ಬರ ಹಾಗೂ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳ ಪ್ರಭಾವದಿಂದ ಬರೋಬ್ಬರಿ 14,357 ಮತಗಳ ಅಂತರದಿಂದ ಛಬ್ಬಿ ಪರಾಭವಗೊಂಡರು.
ಲೋಕಾ ಚುನಾವಣೆ ಕಮಾಲ್:ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಛಬ್ಬಿ, ಲೋಕಸಭೆ ಚುನಾವಣೆ ಫಲಿತಾಂಶ ಬೂಸ್ಟ್ ನೀಡಿದೆ. ಧಾರವಾಡ ಕ್ಷೇತ್ರದ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಹೊತ್ತಿದ್ದ, ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಲಾಡ್ ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಕಾಂಗ್ರೆಸ್ಸಿಗಿಂತ ಬಿಜೆಪಿ ಅಭ್ಯರ್ಥಿಗೆ ಬರೋಬ್ಬರಿ 32,737 ಹೆಚ್ಚು ಮತ ಬಂದಿವೆ. ಇದು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸ್ವತಃ ಶಾಸಕರಾಗುವ ಉಮ್ಮೇದಿಯಲ್ಲಿರುವ ನಾಗರಾಜ ಛಬ್ಬಿ ಅವರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಇದೀಗ ಕ್ಷೇತ್ರದಲ್ಲೆ ಮನೆ ಮಾಡಲು ಯೋಚಿಸಿದ್ದಾರೆ. ಇದಕ್ಕಾಗಿ ದಾಸ್ತಿಕೊಪ್ಪದಿಂದ ರಾಮನಾಳಕ್ಕೆ ತೆರಳುವ ಮಾರ್ಗದಲ್ಲಿ ಮನೆ ಹಾಗೂ ತಮ್ಮ ಕಚೇರಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಮನೆ ಹಾಗೂ ಕಚೇರಿ ನಿರ್ಮಾಣಕ್ಕೆ ಜೂ. 9ರಂದು ಗುದ್ದಲಿಪೂಜೆ ನೆರವೇರಲಿದೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಪ್ರಾರಂಭಿಸಿದ್ದಾರೆ.2023ರ ಚುನಾವಣೆಯಲ್ಲಿ ಟಿಕೆಟ್ ಪಡೆದಿದ್ದ ಛಬ್ಬಿ ಹೊರಗಿನವರು, ಅವರಿಗೇಕೆ ಟಿಕೆಟ್ ಕೊಡುತ್ತೀರಿ ಎಂದು ಸ್ಥಳೀಯ ಬಿಜೆಪಿಗರೇ ಆಕ್ಷೇಪಿಸಿದ್ದುಂಟು. ಕ್ಷೇತ್ರದ ಹೊರಗಿನವನು ಎಂಬುದನ್ನು ಕಾರ್ಯಕರ್ತರ ಮನದಿಂದ ಹೋಗಲಾಡಿಸಲು ಮನೆ ಮತ್ತು ಕಚೇರಿ ನಿರ್ಮಿಸಿಕೊಂಡು ಅಲ್ಲೇ ವಾಸ್ತವ್ಯ ಹೂಡಲು ಮುಂದಾಗಿರುವುದು ಸ್ಪಷ್ಟ.