ಜಿಬಿಎ ಕೋಳಿ ತ್ಯಾಜ್ಯದ ಮೇಲೆ ಕೇಜಿಗೆ 5 ರು. ತೆರಿಗೆ ವಿಧಿಸಿರುವ ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘದ ನೂರಾರು ಸದಸ್ಯರು ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು.

-ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ । ಈಗಾಗಲೇ ಬೆಲೆ ಏರಿಕೆಯಿಂದ ಜನ ತತ್ತರ । ಕೂಡಲೇ ಆದೇಶ ವಾಪಸ್‌ಗೆ ಆಗ್ರಹ

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಿಬಿಎ ಕೋಳಿ ತ್ಯಾಜ್ಯದ ಮೇಲೆ ಕೇಜಿಗೆ 5 ರು. ತೆರಿಗೆ ವಿಧಿಸಿರುವ ಆದೇಶವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕರ್ನಾಟಕ ಕೋಳಿ ಮಾರಾಟಗಾರರ ಸಂಘದ ನೂರಾರು ಸದಸ್ಯರು ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು.

ನಗರದ ಘನತ್ಯಾಜ್ಯ ನಿರ್ವಹಣಾ ಮಂಡಳಿ ಇದ್ದಕ್ಕಿದ್ದಂತೆ ಆದೇಶ ನೀಡಿರುವುದು ಮಾರಾಟಗಾರರಿಗೆ ತೀವ್ರ ಆಘಾತ ತಂದಿದೆ. ನಗರದಲ್ಲಿ ಒಟ್ಟು ಆರೇಳು ಸಾವಿರ ಕೋಳಿ ಅಂಗಡಿಗಳಿದ್ದು, ಅವುಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ಕೇಜಿ ಕೋಳಿ ತ್ಯಾಜ್ಯಕ್ಕೆ 5 ರು. ವಿಧಿಸಿರುವುದು ತಿಂಗಳಿಗೆ ಒಂದು ಅಂಗಡಿಗೆ 4 ರಿಂದ 5 ಸಾವಿರ ರು. ಹೆಚ್ಚುವರಿ ಹೊರೆಯಾಗುತ್ತದೆ. ಈಗಾಗಲೆ ಬೆಲೆ ಏರಿಕೆಯಿಂದ ತತ್ತರಿಸುವ ಜನರ ಮೇಲೆ ಈ ಹಣವನ್ನೂ ಹೊರೆಯಾಗಿ ಹಾಕುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪಾಲಿಕೆ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಚಿಕನ್‌ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯ ತೆಗೆದುಕೊಂಡು ಹೋಗಲು ನಾಲ್ಕು ಜನರಿಗೆ ಆದೇಶ ನೀಡಿದ್ದಾರೆ, ಈ ತ್ಯಾಜ್ಯ ತ್ಯಾಜ್ಯ ತೆಗೆದುಕೊಂಡು ಹೋಗಲು ನಮ್ಮಿಂದ ಶುಲ್ಕ ಪಡೆಯುತ್ತಿದ್ದಾರೆ. ತ್ಯಾಜ್ಯವನ್ನ ಸರ್ಕಾರವಾಗಲಿ ಅಥವಾ ಸರ್ಕಾರದ ವ್ಯಕ್ತಿ ತೆಗೆದುಕೊಂಡು ಹೋಗಲ್ಲ, ಖಾಸಗಿ ವ್ಯಕ್ತಿಗಳು ತೆಗೆದುಕೊಂಡು ಹೋಗಿ, ಅದರ ಸಂಸ್ಕರಣೆ ಮಾಡಿ, ಬೇರೆ ಬೇರೆ ರೀತಿಯಲ್ಲಿ ಮಾರಾಟ ಮಾಡಿಕೊಳ್ತಾರೆ. ಹೀಗಿರುವಾಗ ನಾವೇಕೆ ತೆರಿಗೆ ಕೊಡಬೇಕು ಎಂದು ಪ್ರಶ್ನಿಸಿದರು.

ಅಲ್ಲದೆ, ಎಲ್ಲಾ ಅಂಗಡಿಗಳಿಂದ ಈಗಾಗಲೆ ಪ್ರತ್ಯೇಕವಾಗಿ ಖಾಸಗಿ ಕಂಪನಿಗಳ ಮಧ್ಯವರ್ತಿಗಳು ಚಿಲ್ಲರೆಯಾಗಿ ಕೋಳಿ ತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಸ್ತುತ ಕೋಳಿ ತ್ಯಾಜ್ಯದಿಂದ ಪಾಲಿಕೆಗೆ ಹೊರೆಯಾಗುತ್ತಿಲ್ಲ. ಖಾಸಗಿಯವರು ಕೋಳಿತ್ಯಾಜ್ಯದಿಂದ ಕ್ಯಾಟ ಫೀಡ್, ಫಿಷ್ ಫೀಡ್, ಡಾಗ್ ಫೀಡ್‌ಗಳನ್ನು ತಯಾರಿಸುತ್ತಿದ್ದಾರೆ. ಆದ್ದರಿಂದ ಕೋಳಿ ತ್ಯಾಜ್ಯವನ್ನು ಪಡೆಯುವುದಾದರೆ ಮಾರಾಟಗಾರರಿಗೆ ಹೆಚ್ಚುವರಿ ಹಣ ಕೊಡಸಿಕೊಡಬೇಕು ಎಂದು ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು ಆಗ್ರಹಿಸಿದರು.

-ಬಾಕ್ಸ್-

ಗ್ರೇಟರ್ ಬೆಂಗ್ಳೂರು ಅಲ್ಲ, ಈಟರ್ ಬೆಂಗ್ಳೂರು: ಛಲವಾದಿ

ಇದು ಗ್ರೇಟರ್ ಬೆಂಗ್ಳೂರು ಅಲ್ಲ, ಈಟರ್ ಬೆಂಗಳೂರು ಆಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ಕೋಳಿ ಮಾರಾಟಗಾರರ ಸಂಘದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಒಳ್ಳೆಯ ಸ್ಕೀಮ್ ಗಳನ್ನು ಕೊಡಿ ಎಂದರೆ, ಸ್ಕ್ಯಾಮ್ ಗಳನ್ನೇ ಕೊಡುತ್ತಿದೆ. ಕೋಳಿತ್ಯಾಜ್ಯಕ್ಕೆ 5 ರು. ವಿಧಿಸಿರುವುದೂ ಕೂಡ ಒಂದು ಬಗೆಯ ಸ್ಕ್ಯಾಮ್ ಆಗಿದೆ ಎಂದರು.

ಸರ್ಕಾರ ಮಧ್ಯವರ್ತಿಗಳ ಮೂಲಕ ಕೇವಲ 5 ಕಂಪನಿಗಳಿಗೆ ತ್ಯಾಜ್ಯ ಕೊಡುತ್ತಿದೆ. ಇದರಿಂದ ಆ ಕಂಪನಿಗಳು ಶ್ರೀಮಂತವಾಗುತ್ತವೆ. ಸರ್ಕಾರ ಜನರಿಗೆ ಸವಲತ್ತುಗಳನ್ನು ಕೊಟ್ಟರೆ ಅವರು ಮಾಡುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಸರ್ಕಾರ ಕೋಳಿ ಮಾರಾಟಗಾರರಿಗೆ ಉತ್ತೇಜನ ನೀಡಬೇಕು. ಆದರೆ, ಅವರಿಂದ ಹಣ ಸುಲಿಗೆ ಮಾಡಬಾರದು ಎಂದು ಆರೋಪಿಸಿದರು.

ಫೋಟೋ ಇದೆ)))