ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿ:ದ್ವಿದಳ ಧಾನ್ಯ ಕಡಲೆಕಾಳು ಬೆಳೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಆರಂಭಿಸಿದೆ. ಆದರೆ, ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುತ್ತಿರುವುದರಿಂದ ಕಡಲೆ ಬೆಳೆಗಾರರು ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ.
ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಡಲೆಕಾಳು ಬೆಳೆಯಲಾಗುತ್ತಿದ್ದು, ಸ್ಥಳೀಯ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.ಪ್ರತಿ ಕ್ವಿಂಟಲ್‌ಗೆ ₹ ೫೬೫೦ರಂತೆ ಖರೀದಿಸಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲೇ ₹ 5800 ರಿಂದ ₹5900ರ ವರೆಗೂ ಕಡಲೆಕಾಳು ಮಾರಾಟವಾಗುತ್ತಿದೆ. ಆದ್ದರಿಂದ ಖರೀದಿ ಕೇಂದ್ರಗಳು ಆರಂಭವಾಗಿ 15 ದಿನಗಳಾಗಿದ್ದರೂ ಬೆರಳೆಣಿಕೆಯಷ್ಟು ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ.
ಪ್ರತಿ ಎಕರೆಗೆ ೪ ಕ್ವಿಂಟಲ್‌ನಂತೆ ಗರಿಷ್ಠ ೨೦ ಕ್ವಿಂಟಲ್ ವರೆಗೆ ಪ್ರತಿ ರೈತರಿಂದ ಕಡಲೆಕಾಳು ಖರೀದಿಸಲಾಗುತ್ತಿದೆ. ತೊಗರಿಬೆಳೆಗೆ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ (₹ 7550) ಯೊಂದಿಗೆ ರಾಜ್ಯ ಸರ್ಕಾರ ₹ 450 ಪ್ರೋತ್ಸಾಹಧನ ನೀಡುತ್ತಿದ್ದು, ಅದೇ ಮಾದರಿಯಲ್ಲಿ ಕಡಲೆ ಬೆಳೆಗೂ ರಾಜ್ಯ ಸರ್ಕಾರ ಪ್ರೋತ್ಸಾಹಧನ ಘೋಷಿಸಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.ಪ್ರತಿವರ್ಷ ಡಿಸೆಂಬರ್‌ನಲ್ಲಿ ಕಡಳೆಕಾಳು ಹಂಗಾಮು ಆರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಡಿಸೆಂಬರ್‌ನಲ್ಲಿ ₹ ೬೫೦೦ ರಿಂದ ₹6800ರ ವರೆಗೆ ಕಡಲೆಕಾಳು ಮಾರಾಟವಾಗಿದ್ದು, ಭರ್ಜರಿ ಹಂಗಾಮು ಶುರುವಾದ ಮೇಲೆ ಕಳೆದ ೧೫ ದಿನಗಳಿಂದ ಬೆಲೆ ದಿಢೀರ್ ಕುಸಿತ ಕಂಡಿದೆ. ಈಗೀಗ ಮಾರುಕಟ್ಟೆಯಲ್ಲಿ ₹೫೭೦೦ರಿಂದ ₹೫೯೦೦ರ ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಕಡಲೆಕಾಳು ಮಾರಾಟಕ್ಕೆ ಮನಸ್ಸು ಮಾಡುತ್ತಿಲ್ಲ.
ಜಿಲ್ಲೆಯಲ್ಲಿ 24 ಕೇಂದ್ರ:ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಹುಬ್ಬಳ್ಳಿ ಶಾಖೆಯಿಂದ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಲಾಗುತ್ತದೆ. ಜಿಲ್ಲೆಯಲ್ಲಿ ಜನವರಿ ಕೊನೆಯ ವಾರದಲ್ಲಿಯೇ 24 ಖರೀದಿ ಕೇಂದ್ರ ತೆರೆಯಲಾಗಿದ್ದು, ಕೇಂದ್ರಗಳು ಆರಂಭವಾದ ಬಳಿಕ ಫೆ. 8ರ (ಶನಿವಾರ) ವರೆಗೆ 22 ರೈತರು ಮಾತ್ರ ನೋಂದಣಿ ಮಾಡಿದ್ದಾರೆ. ರೈತರು ಕಡಲೆ ರಾಶಿ ಮಾಡುತ್ತಿದ್ದಾರೆ. ಇನ್ನಷ್ಟೇ ಖರೀದಿ ಪ್ರಕ್ರಿಯೆ ಚುರುಕು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ರಾಜ್ಯ ಸಹಕಾರ ಮಾರಾಟ ಮಂಡಳ ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕ ವಿನಯ ಪಾಟೀಲ.
ಈ ಮಧ್ಯೆ ಕಡಲೆಕಾಳು ಬಿತ್ತಿದ ಮೇಲೆ ಈ ಬಾರಿ ಸುರಿದ ಮಳೆ ಇಳುವರಿಗೆ ತೀವ್ರ ಹೊಡೆತ ಬಿದ್ದಿದ್ದು, ಎಕರೆಗೆ ಎರಡರಿಂದ ಮೂರು ಕ್ವಿಂಟಲ್ ಮಾತ್ರ ಇಳುವರಿಗೆ ಬಂದಿದೆ. ಅಣ್ಣಿಗೇರಿಯಂಥ ಉತ್ಕೃಷ್ಟ ಎರೆಭೂಮಿ ಹೊಂದಿದ ಹೊಲಗಳಲ್ಲಿ ಮಾತ್ರ ಎಕರೆಗೆ 5ರಿಂದ 6 ಕ್ವಿಂಟಲ್ ವರೆಗೂ ಇಳುವರಿ ಬಂದಿದೆ. ಬಿತ್ತನೆ ಬೀಜ ಖರೀದಿ, ಬಿತ್ತನೆ, ಕೀಟನಾಶಕ ಸಿಂಪಡಣೆ, ಕಡಲೆ ಗಿಡಕೀಳುವುದು, ಯಂತ್ರದ ಮೂಲಕ ಒಕ್ಕಲು ಸೇರಿದಂತೆ ಎಕರೆವೊಂದಕ್ಕೆ ಸಹಸ್ರಾರು ರು. ಖರ್ಚು ಮಾಡಿದ್ದಾರೆ.ಎರಡು ದಿನಗಳ ಹಿಂದಷ್ಟೇ 50 ಕ್ವಿಂಟಲ್ ಕಡಲೆ ಕಾಳನ್ನು ₹5800 ದರ ಪಡೆದು ಮಾರುಕಟ್ಟೆಯಲ್ಲಿ ಮಾರಿದ್ದೇನೆ. ಬೆಂಬಲ ಬೆಲೆ ದರ ಮಾರುಕಟ್ಟೆಗಿಂತ ಕ್ವಿಂಟಲ್‌ಗೆ ₹ 200 ಕಡಿಮೆ ಇರುವುದರಿಂದ ಕೇಂದ್ರಕ್ಕೆ ಕಡಲೆಕಾಳು ಮಾರಾಟ ಮಾಡಲಿಲ್ಲ ಎಂದು ಬ್ಯಾಹಟ್ಟಿ ರೈತ ಚನ್ನಪ್ಪ ಬೆಂಗೇರಿ ಹೇಳಿದರು.ಹುಬ್ಬಳ್ಳಿ ತಾಲೂಕಿನಲ್ಲಿ ಈಗಾಗಲೇ 40ರಷ್ಟು ಹಂಗಾಮು ಮುಗಿದಿದೆ. ಸದ್ಯ ಭರ್ಜರಿ ಸುಗ್ಗಿ ಇದ್ದರೂ ಬೆಂಬಲ ಕೇಂದ್ರದಲ್ಲಿ ಧಾರಣೆ ಕಡಿಮೆ ಇರುವುದರಿಂದ ಇತ್ತ ಯಾರೂ ಸುಳಿಯುತ್ತಿಲ್ಲ. ನಮ್ಮಲ್ಲಿ ಇಬ್ಬರು ಬೆಳೆಗಾರರು ಮಾತ್ರ ನೋಂದಣಿ ಮಾಡಿದ್ದಾರೆ ಬ್ಯಾಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸುಭಾಸ ಗಿಡ್ಡನವರ ತಿಳಿಸಿದರು.