ಸಾರಾಂಶ
ಇಲ್ಲಿ ಯಾರೂ ಕೂಡ ಸನ್ಯಾಸಿಗಳಲ್ಲ, ಪ್ರತಿಯೊಬ್ಬ ಶಾಸಕರಿಗೂ ಸಚಿವನಾಗುವ ಬಗ್ಗೆ ಆಸೆ ಇದ್ದೆ ಇರುತ್ತದೆ. ನಮಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಸಹಜವಾಗಿ ಕೇಳುತ್ತಾರೆ ಇದರಲ್ಲೇ ತಪ್ಪೇನು?.
ಹುಬ್ಬಳ್ಳಿ:
ಉತ್ತರ ಕರ್ನಾಟಕದವರು ಮುಖ್ಯಮಂತ್ರಿಗಳಾದರೆ ಹೃತ್ಪೂರ್ವಕವಾಗಿ ಸ್ವಾಗತಿಸುವೆ. ಇನ್ನು ಮುಖ್ಯಮಂತ್ರಿಗಳ ಬದಲಾವಣೆ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರೂ ಕೂಡ ಸನ್ಯಾಸಿಗಳಲ್ಲ, ಪ್ರತಿಯೊಬ್ಬ ಶಾಸಕರಿಗೂ ಸಚಿವನಾಗುವ ಬಗ್ಗೆ ಆಸೆ ಇದ್ದೆ ಇರುತ್ತದೆ. ನಮಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಸಹಜವಾಗಿ ಕೇಳುತ್ತಾರೆ. ಇದರಲ್ಲೇ ತಪ್ಪು? ಇಷ್ಟು ದಿನಗಳ ಕಾಲ ಎಲ್ಲವೂ ವರಿಷ್ಠರ ನಿರ್ಣಯದಂತೆ ನಡೆದುಕೊಂಡು ಬಂದಿದೆ. ನಿರ್ಣಯ ಅವರಿಗೆ ಬಿಟ್ಟಿದ್ದು. ಅಧಿಕಾರ ಹಂಚಿಕೆ ಮಾತುಕತೆಯ ಕುರಿತು ನನಗೆ ಮಾಹಿತಿಯಿಲ್ಲ ಎಂದರು.
ರಾಜ್ಯದ ಉಸ್ತುವಾರಿ ರಣದೀಪಪಿಂಗ್ ಸುರ್ಜೆವಾಲಾ ಬಹಿರಂಗ ಹೇಳಿಕೆ ನೀಡಬೇಡಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ಶಿಸ್ತು ಉಲ್ಲಂಘನೆಯಾದಲ್ಲಿ ಪಕ್ಷ ಶಿಥಿಲ ಆದಂತಾಗುತ್ತದೆ. ಹೀಗಾಗಿ ಮಾಧ್ಯಮದ ಎದುರು ಹೋಗಬೇಡಿ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಮ್ಮ ವಿಚಾರಗಳನ್ನು ಹೇಳಬಹುದಲ್ಲ. ಅದರ ಬದಲು ಮಾಧ್ಯಮಕ್ಕೆ ಹೋಗಿ ಹೇಳಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ಆ ದೃಷ್ಟಿಯಿಂದ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದರು.ಎಲ್ಲರೂ ಆಕಾಂಕ್ಷಿಗಳು:
ಅಧಿಕಾರ ಹಂಚಿಕೆ ವಿಚಾರವಾಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಕಾರ್ಯಕರ್ತರು ಶಾಸಕರಾಗಬೇಕು ಎನ್ನುತ್ತಾರೆ. ಶಾಸಕರು ಮಂತ್ರಿಯಾಗಬೇಕು, ಮಂತ್ರಿಗಳು ಮುಖ್ಯಮಂತ್ರಿಗಳಾಗಬೇಕು ಎನ್ನುತ್ತಾರೆ. ಇದು ಸಹಜ ಎಲ್ಲರೂ ಆಕಾಂಕ್ಷಿಗಳೆ ಎಂದ ಅವರು, ಜನರ ಕಣ್ಣೀರು ಒರೆಸಲು ರಾಜಕಾರಣಕ್ಕೆ ಬರಬೇಕು. ಆದರೆ, ಈಗಿನ ರಾಜಕಾರಣ ಯಾವ ಮಟ್ಟಕ್ಕೆ ಬಂದಿದೆ ಎಂದು ಹೇಳಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.