ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ಕಾವೇರಿ ನದಿ ಮಧ್ಯದಲ್ಲಿ ದಾಸ ಶ್ರೇಷ್ಠರಾದ ಕನಕದಾಸರು ಕುಳಿತು ಧ್ಯಾನ ಮಾಡಿರುವ ಕನಕ ಬಂಡೆಯನ್ನು ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 537ನೇ ಕನಕ ಜಯಂತ್ಯುತ್ಸವವನ್ನು ಉದ್ಘಾಟಿಸಿ ಹಾಗೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಕನಕ ಬಂಡೆ ಅಭಿವೃದ್ಧಿಗೆ ಹಲವರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕನಕದಾಸರ ಇತಿಹಾಸವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ವರದಿ ರಚಿಸಿ ನಂತರ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅಭಿವೃದ್ಧಿಗಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ’ ಎಂಬ ಕನಕದಾಸರ ಕೀರ್ತನೆ ಇಂದಿಗೂ ಪ್ರಸ್ತುತವಾಗಿದೆ. ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಸಾರ ಕೃತಿಗಳನ್ನು ಕನಕದಾಸರು ರಚಿಸಿದ್ದು, ಅವರು ತೋರಿದ ಸನ್ಮಾರ್ಗದಲ್ಲಿ ನಡೆಯೋಣ ಎಂದರು.ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆ ಅವರ ಕೊಡುಗೆ ಅಪಾರವಾಗಿದೆ. ಶ್ರೀಕೃಷ್ಣ ಪರಮಾತ್ಮ ದೇವರೇ ಕನಕದಾಸರ ಭಕ್ತಿಗೆ ಮೆಚ್ಚಿ ಅವರಿಗೆ ವಿಶೇಷ ದರ್ಶನ ನೀಡಿದ ಘಟನೆಯು ಜನಮಾನಸದಲ್ಲಿ ಭಕ್ತಿಪೂರ್ವಕವಾಗಿ ಉಳಿದಿದೆ ಎಂದು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಹಾವೇರಿ ಜಿಲ್ಲೆಯಲ್ಲಿ ಕನಕ ಪೀಠವನ್ನು ಸ್ಥಾಪನೆ ಮಾಡಿದರು. ನಮ್ಮ ದೇಶದಲ್ಲಿ ಕನಕದಾಸ ಅವರಂತಹ ಶ್ರೇಷ್ಠ ವ್ಯಕ್ತಿಗಳು ಹಾಗೂ ದಾರ್ಶನಿಕರು ಜನಿಸಿದ್ದು, ಇವರನ್ನು ಸದಾ ಗೌರವಿಸುವ ಕೆಲಸ ಆಗಬೇಕು ಎಂದರು.ಶಾಸಕ ಪಿ.ರವಿಕುಮಾರ್ ಮಾತನಾಡಿ, ಕನಕದಾಸರು ಜಾತಿ ಪದ್ಧತಿ ಹೋಗಲಾಡಿಸಲು ಹೋರಾಟ ಮಾಡಿದ ಒಬ್ಬ ಸಂತ. ಸಮಾಜದಲ್ಲಿ ಒಗ್ಗಟ್ಟನ್ನು ತರಲು ಅಂದು ಮಹಾನ್ ಹೋರಾಟಗಾರರಾಗಿ ಹೊರಹೊಮ್ಮಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.
ಸಮಾರಂಭದಲ್ಲಿ ತಳಗವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕಿ ಎಂ.ಡಿ.ಪವಿತ್ರಾ ಮಾತನಾಡಿದರು. ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ನಯೀಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ತಿಮ್ಮಯ್ಯ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಕನಕ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕುಮಾರ ಅವರು ಕನಕದಾಸರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಮಾವೇಶಗೊಂಡಿತು.