ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿಯೇ ಬಸ್‌ಗೆ ‘ಬರ’..!

| Published : Jun 14 2024, 01:05 AM IST / Updated: Jun 14 2024, 04:03 PM IST

ಸಾರಾಂಶ

ಹುಲ್ಲಹಳ್ಳಿಯು ನಂಜನಗೂಡು ತಾಲೂಕಿನ ಬಹುದೊಡ್ಡ ಹೋಬಳಿ ಕೇಂದ್ರ  ಇಂತಹ ದೊಡ್ಡ ಗ್ರಾಮಕ್ಕೆ ನಂಜನಗೂಡಿನಿಂದ ಹುಲ್ಲಹಳ್ಳಿ ಮಾರ್ಗವಾಗಿ ಸಾಕಷ್ಟು ಬಸ್ ವ್ಯವಸ್ಥೆ ಇಲ್ಲದೆ ಗಂಟೆಗಟ್ಟಲೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಎಚ್.ಡಿ. ರಂಗಸ್ವಾಮಿ

 ನಂಜನಗೂಡು :  ಹುಲ್ಲಹಳ್ಳಿಯಿಂದ ನಂಜನಗೂಡು ಕಡೆಗೆ ಸಂಚರಿಸಲು ಗಂಟೆಗಟ್ಟಲೆ ಕಾದರೂ ಸಹ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಎದುರಾಗಿದ್ದು. ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹುಲ್ಲಹಳ್ಳಿಯು ನಂಜನಗೂಡು ತಾಲೂಕಿನ ಬಹುದೊಡ್ಡ ಹೋಬಳಿ ಕೇಂದ್ರ, ನಂಜನಗೂಡಿಗಿಂತಲೂ ಹೆಚ್ಚಾಗಿ ವಾಣಿಜ್ಯ ವಹಿವಾಟು ನಡೆಯುವ ಹೋಬಳಿ, ಈ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿಯೂ ಸಹ ಮಾಡಬೇಕು ಎಂಬುದು ಬಹುದಿನದ ಬೇಡಿಕೆ. ಇಂತಹ ದೊಡ್ಡ ಗ್ರಾಮಕ್ಕೆ ನಂಜನಗೂಡಿನಿಂದ ಹುಲ್ಲಹಳ್ಳಿ ಮಾರ್ಗವಾಗಿ ಸಾಕಷ್ಟು ಬಸ್ ವ್ಯವಸ್ಥೆ ಇಲ್ಲದೆ ಗಂಟೆಗಟ್ಟಲೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೋನಾಗಿಂತ ಮುಂಚಿತವಾಗಿ ಬೆಳಗ್ಗೆ 5 ರಿಂದಲೇ ಬಸ್ ಸೇವೆ ಲಭ್ಯವಾಗುತ್ತಿತ್ತು. ಈಗ ಬಸ್ ಗಳ ಸಂಖ್ಯೆನ್ನು ಕಡಿಮೆ ಮಾಡಿರುವ ಕಾರಣ ಬೆಳಗ್ಗೆ 6.30 ರಿಂದ ಬಸ್ ಲಭ್ಯವಾಗುತ್ತಿದೆ. ಅಲ್ಲದೆ ಪ್ರತಿ 15 ನಿಮಿಷಗಳಿಗೊಮ್ಮೆ ಬಸ್ ಸಂಚರಿಸುತ್ತಿದ್ದವು. ಈಗ ಶಕ್ತಿಯೋಜನೆ ಜಾರಿ ನಂತರ ಒಂದು ಗಂಟೆ ಕಾದರೂ ಸಹ ಬಸ್ ಬಾರದೆ ಸಾರ್ವಜನಿಕರು ಪರದಾಡುವಂತಾಗಿದೆ.

ಹುಲ್ಲಹಳ್ಳಿ ಪ್ರಮುಖ ದೊಡ್ಡ ಹೋಬಳಿ ಕೇಂದ್ರವಾಗಿರುವ ಕಾರಣ ತಾಲೂಕು ಕೇಂದ್ರದಿಂದ ನಿರಂತರವಾಗಿ ಪ್ರತಿ 15 ನಿಮಿಷಗಳಿಗೊಮ್ಮೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಖಾಸಗಿ ಟೆಂಪೋಗಳ ಹಾವಳಿ:

ಗಂಟೆಗಟ್ಟಲೆ ಬಸ್ ವ್ಯವಸ್ಥೆ ಇಲ್ಲದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಟೆಂಪೋಗಳು ನಿಯಮವನ್ನೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಸಿಕೊಂಡು ಸಂಚರಿಸುತ್ತವೆ. ಇದರಿಂದ ದಿನನಿತ್ಯ ಈ ಮಾರ್ಗದಲ್ಲಿ ಒಂದಲ್ಲೊಂದು ಅಪಘಾತಗಳು ಜರುಗುತ್ತಲೇ ಇರುತ್ತವೆ. ಸಾರ್ವಜನಿಕರ ಪ್ರಾಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ. ಜೊತೆಗೆ ಟೆಂಪೋಗಳು ಬಸ್ ನಿಲ್ದಾಣದಿಂದ 100 ಮೀ ದೂರದಲ್ಲಿ ನಿಲ್ಲಿಸಬಾರದು ಎಂಬ ನಿಯಮವಿದ್ದರೂ ಸಹ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಟೆಂಪೋಗಳನ್ನು ನಿಲ್ಲಿಸಿಕೊಂಡು ಬಸ್ ಬರಲು ಒಂದು ಗಂಟೆ ಕಾಯಬೇಕಾಗುತ್ತದೆ ಎಂದು ಹೇಳಿ ಟೆಂಪೋಗೆ ಹತ್ತಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದ ಕೆಎಸ್ಆರ್ಟಿಸಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನವೂ ಕೂಡ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ:

ಹುಲ್ಲಹಳ್ಳಿಯ ಗಿರೀಶ್ ಮತ್ತು ಕಪ್ಪಸೋಗೆ ಗ್ರಾಮದ ದೇವರಾಜು ಪತ್ರಿಕೆಯೊಂದಿಗೆ ಮಾತನಾಡಿ, ಗುರುವಾರ ಬೆಳಗ್ಗೆ 8.30ಕ್ಕೆ ಹುಲ್ಲಹಳ್ಳಿ ಬಸ್ ನಿಲ್ದಾಣಕ್ಕೆ ಬಂದೆವು 10 ಗಂಟೆಯಾದರೂ ಸಹ ಬಸ್ ಬಂದಿಲ್ಲ, ಇದರಿಂದ ನಮಗೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಜೊತೆಗೆ ವಿದ್ಯಾರ್ಥಿಗಳೂ ಸಹ ಶಾಲಾ, ಕಾಲೇಜಿಗೆ ತೆರಳಲು ಸಾಧ್ಯವಾಗಿಲ್ಲ, ಇದರಿಂದ ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮುಂಚೆ ಪ್ರತಿ 15 ನಿಮಿಷಗಳಿಗೊಮ್ಮೆ ಬಸ್ ಸಂಚಾರ ಇರುತ್ತಿದ್ದವು, ಈಗ ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಸ್ ನಿಲ್ದಾಣ ವ್ಯವಸ್ಥಾಪಕರನ್ನು, ಡಿಪೋ ವ್ಯವಸ್ಥಾಪಕರನ್ನು ಪ್ರಶ್ನಿಸಿದಲ್ಲಿ ಅವರು ಹಾರಿಕೆಯ ಉತ್ತರ ನೀಡುತ್ತಾರೆ. ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಕ್ರಮವಹಿಸಿ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ನಂಜನಗೂಡಿನಿಂದ ಹುಲ್ಲಹಳ್ಳಿ, ಹುಲ್ಲಹಳ್ಳಿಯಿಂದ ನಂಜನಗೂಡು ಮಾರ್ಗವಾಗಿ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ ವ್ಯವಸ್ಥೆ ಇದೆ. ಯಾವುದೇ ತೊಂದರೆಯಾಗಿಲ್ಲ. ಒಂದು ವೇಳೆ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದಲ್ಲಿ ಪರಿಶೀಲನೆ ನಡೆಸಿ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಲಾಗುವುದು.

- ತ್ಯಾಗರಾಜ್, ನಂಜನಗೂಡು ಬಸ್ ಡಿಪೋ ವ್ಯವಸ್ಥಾಪಕ