ನಾಳೆ ಅರಸೀಕೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Jul 25 2025, 12:30 AM IST

ನಾಳೆ ಅರಸೀಕೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆಗೆ ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರು ಆಗಮಿಸಲಿದ್ದು, ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಹಲವು ಕಾಮಗಾರಿಗೆ ಶಂಕುಸ್ಥಾಪನೆಯನ್ನು ಅವರು ನೆರವೇರಿಸಲಿದ್ದಾರೆ ಎಂದು ಶಾಸಕ ಕೆಎಂ ಶಿವಲಿಂಗೇಗೌಡ ತಿಳಿಸಿದರು. ಸರ್ಕಾರದ ಖಜಾನೆ ಖಾಲಿಯಾಗಿದೆ ಸರಕಾರದಲ್ಲಿ ದುಡ್ಡಿಲ್ಲ ಎಂದು ಹೇಳುತ್ತಿರುವ ವಿರೋಧ ಪಕ್ಷದವರಿಗೆ ಉತ್ತರ ನೀಡುವ ಸಮಾವೇಶ ಇದಾಗಿದೆ ಎಂದರು. ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಕೃತಜ್ಞತೆಯನ್ನು ಸಲ್ಲಿಸುವ ಒಂದು ಕೃತಜ್ಞತಾ ಸಮಾರಂಭ ಅಥವಾ ಅಭಿನಂದನಾ ಸಮಾರಂಭ ಎಂದು ಹೇಳಬಹುದು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇದೇ 26ರಂದು ಅರಸೀಕೆರೆಗೆ ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರು ಆಗಮಿಸಲಿದ್ದು, ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಹಲವು ಕಾಮಗಾರಿಗೆ ಶಂಕುಸ್ಥಾಪನೆಯನ್ನು ಅವರು ನೆರವೇರಿಸಲಿದ್ದಾರೆ ಎಂದು ಶಾಸಕ ಕೆಎಂ ಶಿವಲಿಂಗೇಗೌಡ ತಿಳಿಸಿದರು.

ಜೇನುಕಲ್ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 26ರಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಂಪುಟದ ಇತರೆ ಸಚಿವರು ಆಗಮಿಸಲಿದ್ದಾರೆ. ಇದಕ್ಕಾಗಿ ನಗರದ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಹಾಗೂ ಸಭಾ ಮಂಟಪ ಸಜ್ಜುಗೊಳ್ಳುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ ಸರಕಾರದಲ್ಲಿ ದುಡ್ಡಿಲ್ಲ ಎಂದು ಹೇಳುತ್ತಿರುವ ವಿರೋಧ ಪಕ್ಷದವರಿಗೆ ಉತ್ತರ ನೀಡುವ ಸಮಾವೇಶ ಇದಾಗಿದೆ ಎಂದರು. ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಕೃತಜ್ಞತೆಯನ್ನು ಸಲ್ಲಿಸುವ ಒಂದು ಕೃತಜ್ಞತಾ ಸಮಾರಂಭ ಅಥವಾ ಅಭಿನಂದನಾ ಸಮಾರಂಭ ಎಂದು ಹೇಳಬಹುದು. ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸರಕಾರದ ಯೋಜನೆಯ ಸದುಪಯೋಗವನ್ನು ಪಡೆದಿದ್ದಾರೆ. ಅವರು ಇಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರವನ್ನ ಅಭಿನಂದಿಸಲಿದ್ದಾರೆ ಎಂದು ಹೇಳಿದರು. ಈಗಾಗಲೇ ಪೂರ್ಣಗೊಂಡಿರುವ ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಈಜುಕೊಳ, ತರಕಾರಿ ಮಾರುಕಟ್ಟೆ ಮೊದಲಾದವುಗಳನ್ನು ಸಿಎಂ ಉದ್ಘಾಟಿಸಲಿದ್ದಾರೆ. ನ್ಯಾಯಾಲಯ ಕಟ್ಟಡ ಉದ್ಘಾಟನೆ ಆಗಬೇಕಿತ್ತು. ಆದರೆ ಅದು ಮುಂದಿನ ದಿನಗಳಲ್ಲಿ ಆಗಲಿದೆ. ಎತ್ತಿನಹೊಳೆ ಯೋಜನೆಗೆ ಇದ್ದ ಅಡಚಣೆ ನಿವಾರಣೆಯಾಗಿದ್ದು, ಅನುದಾನವು ಬಿಡುಗಡೆಯಾಗಿದೆ. ಅದರ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ಹಾಲಿ ಇರುವ ತರಕಾರಿ ಮಾರುಕಟ್ಟೆ ಸಂತೆ ಮೈದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಹಳೆ ತರಕಾರಿ ಮಾರುಕಟ್ಟೆ ಸ್ಥಳದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುವುದು ರಸ್ತೆ ಬದಿಯಲ್ಲಿ ಅಲ್ಲಲ್ಲಿ ಗಾಡಿಗಳಲ್ಲಿ ಆಹಾರ ಮಾರುವವರಿಗೆ ಇಲ್ಲಿ ಫುಡ್‌ಕೋರ್ಟ್ ನಿರ್ಮಿಸಿಕೊಡಲಾಗುತ್ತಿದೆ ಈ ಕಟ್ಟಡದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದರು.

ಅರಸೀಕೆರೆ ತಾಲೂಕಿಗೆ 50 ಮೆಗಾವ್ಯಾಟ್‌ ವಿದ್ಯುತ್ ಲಭ್ಯವಿದ್ದು, ಬೇಡಿಕೆ 80ರಿಂದ 95 ಮೆಗಾವ್ಯಾಟ್ ಇದೆ. ಅದಕ್ಕಾಗಿ 45ರಿಂದ 50 ಮೆಗಾವ್ಯಾಟ್, ಸೋಲಾರ್ ಇಂದ ಪಡೆಯಲು ಸೂಕ್ತ ಜಾಗವನ್ನು ನೋಡಲಾಗಿದೆ. ಇದುಕ್ಕೆ ಸಹ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇನ್ನು ವಿಶೇಷವೇನೆಂದರೆ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಯನ್ನು ನಿರ್ಮಿಸಲಾಗುವುದು, ಇದಕ್ಕೆ ಈಗಾಗಲೇ ಮಂಜೂರಾತಿ ದೊರೆತಿದೆ. ಇದರ ಪೂಜೆಯನ್ನು ಸಹ ನೆರವೇರಿಸಲಿದ್ದಾರೆ. 28 ಕೋಟಿ ವೆಚ್ಚದಲ್ಲಿ ನೂತನ ಬಸ್ಟ್ಯಾಂಡ್ ನಿರ್ಮಿಸಲಾಗುವುದು. ಪಶು ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದ್ದು ಹಳೆ ಕಟ್ಟಡದ ಆವರಣವನ್ನು ಬಸ್ ನಿಲ್ದಾಣಕ್ಕೆ ಸೇರಿಸಿಕೊಂಡು ಬಸ್ ನಿಲ್ದಾಣವನ್ನು ವಿಸ್ತರಿಸಲಾಗುವುದು ಎಂದರು.

ಹೌಸಿಂಗ್ ಫಾರ್ ಆಲ್ ಯೋಜನೆ ಅಡಿ 1,200 ಮನೆಗಳು ಮಂಜೂರಾಗಿದ್ದು, ಕಟ್ಟಡಗಳು ಬಹುತೇಕ ಪೂರ್ಣ ಹಂತದಲ್ಲಿದೆ. 300 ಮನಗಳಿಗೆ ಹಕ್ಕುಪತ್ರವನ್ನು ಸಹ ಮುಖ್ಯ ಮಂತ್ರಿಗಳು ನೀಡಲಿದ್ದಾರೆ. ಪತ್ರಕರ್ತರ ಭವನ ಅವಶ್ಯಕತೆ ಇತ್ತು ಇದಕ್ಕಾಗಿ ನಗರಸಭೆಯಿಂದ ನಿವೇಶ ನೀಡಿದ್ದು ನಿವೇಶನಕ್ಕೆ ಸಂಘವು ಕಟ್ಟಬೇಕಾದ 8.50 ಲಕ್ಷ ರುಪಾಯಿಗಳನ್ನು ನಾನು ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ನಾನು ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಸ್ನೇಹಿತರು ಭರಿಸಿದ್ದೇವೆ ಎಂದ ಅವರು, ನಗರಸಭೆಯಿಂದ 30 ಕೋಟಿಗೂ ಅಧಿಕ ಅಭಿವೃದ್ಧಿ ಕಾಮಗಾರಿ ಆಗಿದೆ. ನಗರಸಭಾ ಅಧ್ಯಕ್ಷರು, ಸದಸ್ಯರು ಸಹ ಅಂದು ಮುಖ್ಯ ಮಂತ್ರಿಯನ್ನು ಅಭಿನಂದಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷ ಶಮಿಉಲ್ಲ, ಉಪಾಧ್ಯಕ್ಷ ಮನೋಹರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್‌ ಮುರುಂಡಿ ಶಿವಯ್ಯ ಉಪಸ್ಥಿತರಿದ್ದರು.