ಕಾವೇರಿ ಮಾತೆಗೆ ಪೂಜೆ ಸಲ್ಲಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Jul 30 2024, 12:35 AM IST

ಸಾರಾಂಶ

ಬಾಗಿನ ಸಮರ್ಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯನವರು ಮೆಟ್ಟಿಲುಗಳನ್ನು ಇಳಿಯಲಾಗದ ಕಾರಣ ಮತ್ತೆ ವಿಶೇಷ ವಾಹನವೇರಿದರು. ಅವರನ್ನು ಸಚಿವರು, ಶಾಸಕರು ಹಿಂಬಾಲಿಸಿದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ಡಿ.ಕೆ.ಶಿವಕುಮಾರ್, ದಿನೇಶ್‌ಗೂಳಿಗೌಡ ಅವರು ಮೆಟ್ಟಿಲುಗಳ ಮೂಲಕ ಇಳಿದು ಬಂದು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಮಾನ್ಯವಾಗಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದಾಗಲೆಲ್ಲಾ ಮುಖ್ಯಮಂತ್ರಿಯವರು ಅಣೆಕಟ್ಟೆಯ ಮೇಲ್ಭಾಗದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿ ಕೆಳಭಾಗದಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಸಿದ್ದರಾಮಯ್ಯನವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿ, ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸದೆ ವೇದಿಕೆ ಏರಿದ್ದು ವಿಶೇಷವಾಗಿತ್ತು.

ಆದರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ್ರ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಬಂದು ಕಾವೇರಿ ಪ್ರತಿಮೆಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ಬಾಗಿನ ಸಲ್ಲಿಕೆಯ ದಿನವಾದ ಸೋಮವಾರ ಅಣೆಕಟ್ಟೆಯ ಪ್ರವೇಶ ದ್ವಾರದಿಂದ ವಿಶೇಷ ವಾಹನದಲ್ಲಿ ಬಾಗಿನ ಸಮರ್ಪಿಸುವ ಕಾರ್ಯಕ್ರಮದ ಬಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರು, ಶಾಸಕರೊಂದಿಗೆ ಆಗಮಿಸಿದರು. ಆ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಬಾಗಿನ ತುಂಬಿದ ಮೊರಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಮೊರಗಳನ್ನು ಸಿಎಂ, ಡಿಸಿಎಂ, ಸಚಿವರು, ಶಾಸಕರಿಗೆ ನೀಡಲಾಯಿತು. ಎಲ್ಲರೂ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು.

ಬಾಗಿನ ಸಮರ್ಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯನವರು ಮೆಟ್ಟಿಲುಗಳನ್ನು ಇಳಿಯಲಾಗದ ಕಾರಣ ಮತ್ತೆ ವಿಶೇಷ ವಾಹನವೇರಿದರು. ಅವರನ್ನು ಸಚಿವರು, ಶಾಸಕರು ಹಿಂಬಾಲಿಸಿದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ಡಿ.ಕೆ.ಶಿವಕುಮಾರ್, ದಿನೇಶ್‌ಗೂಳಿಗೌಡ ಅವರು ಮೆಟ್ಟಿಲುಗಳ ಮೂಲಕ ಇಳಿದು ಬಂದು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಅಣೆಕಟ್ಟೆಯ ಮೇಲ್ಭಾಗದಿಂದ ವೇದಿಕೆ ಸಮೀಪ ಬಂದ ವೇಳೆ ಸಿದ್ದರಾಮಯ್ಯನವರು ಕಾವೇರಿ ಪ್ರತಿಮೆ ಬಳಿ ತೆರಳು ಪೂಜೆ ಸಲ್ಲಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅತ್ತ ಕಡೆ ಸಾಗದೆ ಸಿಎಂ ನೇರವಾಗಿ ವೇದಿಕೆ ಏರಿದರು. ತಮ್ಮ ಭಾಷಣದಲ್ಲಿ ಮಾತ್ರ ಕಾವೇರಿ ಮಾತೆ ಪ್ರತಿ ವರ್ಷವೂ ಇದೇ ರೀತಿ ಕೃಪೆ ತೋರಿ ಜಲಾಶಯ ಭರ್ತಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಆಷಾಢದಲ್ಲೇ ಬಾಗಿನ

ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದಾಗಲೆಲ್ಲಾ ಆಷಾಢ ಮುಗಿದ ನಂತರ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಲಾಗುತ್ತಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಆಷಾಢದಲ್ಲೇ ಪೂಜೆ ಸಲ್ಲಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಆಷಾಢ ಮಾಸದಲ್ಲೇ ಜಲಾಶಯ ಭರ್ತಿಯಾದರೂ ಅಮಾವಾಸ್ಯೆ ಕಳೆದು ಶ್ರಾವಣ ಮಾಸ ಆರಂಭದ ಬಳಿಕವೇ ಬಾಗಿನ ಸಲ್ಲಿಸುತ್ತಿದ್ದರು. ಸಿಎಂ ಅವರ ವ್ಯತಿರಿಕ್ತ ನಡೆ ಹಲವರಲ್ಲಿ ಅಸಮಾಧಾನ ಮೂಡಿಸಿತ್ತು.

ಸಂಪ್ರದಾಯಕ್ಕೆ ಎಳ್ಳು-ನೀರು!

ಕಾವೇರಿ ಬಾಗಿನ ಸಲ್ಲಿಕೆ ಕಾರ್ಯಕ್ರಮದ ದಿನ ಸಸ್ಯಾಹಾರಿ ಭೋಜನ ಏರ್ಪಡಿಸುವುದು ಸಂಪ್ರದಾಯವಾಗಿತ್ತು. ಈ ಬಾರಿ ಸಂಪ್ರದಾಯ ಮುರಿದು ಬಾಗಿನ ದಿವಸ ಬಾಡೂಟ ಆಯೋಜಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಮುಖ್ಯಮಂತ್ರಿ, ಸಚಿವರು ಹೊರಟ ಬಳಿಕ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ಬೆಂಬಲಿಗರಿಗೆ ಖಾಸಗಿ ಹೋಟೆಲ್‌ನಲ್ಲಿ ಭರ್ಜರಿ ಬಾಡೂಟವನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆಯೋಜಿಸಿದ್ದರು. ಹಿಂದೆಂದೂ ಬಾಗಿನ ಸಲ್ಲಿಸಿದ ದಿವಸ ಬಾಡೂಟ ಆಯೋಜಿಸಿದ್ದ ಉದಾಹರಣೆಯೇ ಇಲ್ಲ.ಇದೇ ಮೊದಲ ಬಾರಿಗೆ ಬಾಗಿನ ಸಲ್ಲಿಸಿದ ದಿನ ಬಾಡೂಟ ಆಯೋಜನೆ ಮಾಡಿ ನಿಗಮದ ಅಧಿಕಾರಿಗಳು ಸಂಪ್ರದಾಯ ಮುರಿದ ಆರೋಪಕ್ಕೆ ಗುರಿಯಾದರು.