ಸಾರಾಂಶ
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ. ಜನರಿಗೆ ಏನಾದರೂ ಅಭಿವೃದ್ಧಿ ಮಾಡಬೇಕು ಅನ್ನೋದು ಇವರ ತಲೆಯಲ್ಲಿದೆಯಾ? ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ. ಜನರಿಗೆ ಏನಾದರೂ ಅಭಿವೃದ್ಧಿ ಮಾಡಬೇಕು ಅನ್ನೋದು ಇವರ ತಲೆಯಲ್ಲಿದೆಯಾ? ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನಿರ್ಮಿಸಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಸಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಹಣವನ್ನು ಸರಿಯಾಗಿ ಹಾಕುತ್ತಿಲ್ಲ. ಮುಂದೆ ಬರುವ ಜಿಪಂ, ಗ್ರಾಪಂ ಚುನಾವಣೆ ವೇಳೆ ನಿಮಗೆ ಹಣ ಹಾಕಿ ಮತ ಹಾಕಿಸಿಕೊಳ್ತಾರೆ. ಯಾರಪ್ಪನ ಮನೆ ದುಡ್ಡು ಅಂತಾ ಕೊಡ್ತಾರೆ.? ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು.ನಾವೇನು ಶಾಶ್ವತ ಅಲ್ಲ, ಮುಂದಿನ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಂದರು.
ಸರ್ಕಾರ ದಿನ ಬೆಳಿಗ್ಗೆಯಾದರೆ, ನಮ್ಮ ಮೇಲೆ ಟೀಕೆ ಮಾಡಿಕೊಂಡು ಕೂತಿದೆ. ಎಲ್ಲ ದರ ಏರಿಕೆ ಮಾಡುತ್ತಿದ್ದಾರೆ. ಬಸ್ ಉಚಿತ ಅಂತಾರೆ, ಈಗ ಮೆಟ್ರೋ ದರ ಏರಿಕೆ ಆಗಿದೆ. ಮುಂದೆ ಕರೆಂಟ್ ಪರಿಸ್ಥಿತಿ ಏನಾಗಲಿದೆ ಎಂಬುದು ನಿಮಗೆ ಗೊತ್ತಾಗಲಿದೆ. ನಿಮ್ಮ ದುಡ್ಡು ಹೊಡೆದು ನಿಮಗೇ ಕೊಡುತ್ತಾರೆ. ಜನರ ತೆರಿಗೆ ದುಡ್ಡು ತೆಗೆದುಕೊಂಡು ಮತ್ತೆ ಅವರಿಗೆ ಕೊಡುವ ಹಾಗಿದ್ರೆ ನಾನು ತಿಂಗಳಿಗೆ ಮಹಿಳೆಯರಿಗೆ ೧೦ ಸಾವಿರ ಹಣ ಕೊಡ್ತಿದ್ದೆ ಎಂದರು.
ಬಂಡುಬಿದ್ದ ಸರ್ಕಾರ:
ರಾಜ್ಯದಲ್ಲಿ ದುಡ್ಡಿಗೆ ಸಮಸ್ಯೆ ಇಲ್ಲ. ರೈತರ ಸಾಲಮನ್ನಾ ಮಾಡಿ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಇವರಿಗ್ಯಾಕೆ ಅದು ಆಗ್ತಿಲ್ಲ. ಜನರ ತರಿಗೆ ಹಣವನ್ನ ಲೂಟಿ ಮಾಡಿಕೊಂಡು ಕೂತಿದ್ದಾರೆ. ರಾಜ್ಯದ ಜನ ಯಾಕೆ ಇದನ್ನ ಸಹಿಸಿಕೊಳ್ತಿದ್ದೀರಿ.? ಶಾಲೆಗೆ ಶಿಕ್ಷಕರ ನೇಮಕ ಮಾಡ್ತಿಲ್ಲ. ರಾಜ್ಯದಲ್ಲಿ ಎರಡು ಮುಕ್ಕಾಲು ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಕೆಪಿಎಸ್‌ಸಿಯಲ್ಲಿ ಏನು ಸರಿ ಇಲ್ಲ. ಪ್ರಶ್ನೆ ಪತ್ರಿಕೆ, ಅಂಕ ಎಲ್ಲಕ್ಕೂ ಎಷ್ಟು ಹಣ ನಿಗಧಿ ಮಾಡಿದ್ದೀರಿ. ಇದೆಲ್ಲ ಸಿದ್ದರಾಮಯ್ಯ ಅವಧಿಯಲ್ಲಿ ಆಗ್ತಿರೋದು. ಈ ಸರ್ಕಾರ ಬಂಡುಬಿದ್ದು ಹೋಗಿದೆ. ಮಾನ ಮರ್ಯಾದೆ ಏನು ಇಲ್ಲ, ಎಷ್ಟು ಮಾತನಾಡಿದರು ಅಷ್ಟೇ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಆಯ್ತು, ಸಾಕಷ್ಟು ಹೋರಾಟ ಆಯ್ತು. ಈಗ ಕರ್ನಾಟಕ ಬಂದ್‌ಗೂ ಕರೆ ಕೊಟ್ಟಿದ್ದಾರೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಪಕ್ಕದ ಮಹಾರಾಷ್ಟ್ರದವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಆಗ ನಾನು ಬೆಳಗಾವಿಯಲ್ಲೇ ಅಧಿವೇಶನ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ. ಕೇವಲ ಒಂದು ವಾರದಲ್ಲಿ ವಿಧಾನಸಭೆ ಅಧಿವೇಶನ ಮಾಡಿದ್ದವು. ಬಳಿಕ ಸುವರ್ಣ ಸೌಧಕ್ಕೆ ಗುದ್ದಲಿಪೂಜೆ ಮಾಡಿದ್ದೆವು. ಆದರೆ ಆ ಬಳಿಕ ಬಂದ ಸರ್ಕಾರ ಅಲ್ಲಿ ನಮ್ಮ ಹೆಸರನ್ನೂ ಹಾಕಲಿಲ್ಲ. ಕಲ್ಲಿನ ಮೇಲೆ ನಮ್ಮ ಹೆಸರು ಬೇಕಾಗಿಲ್ಲ. ಜನರ ಮನಸ್ಸಿನಲ್ಲಿ ಇರಬೇಕು ಎಂದರು.
ಈಗ ಏನೋ ಪಾಪ ಚನ್ನಪಟ್ಟಣದಲ್ಲಿ ನಮ್ಮ ಸಾಕ್ಷಿ ಗುಡ್ಡೆ ಕೇಳುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಶಾಸಕರು ಗೆದ್ದು ನಾಲ್ಕು ತಿಂಗಳು ಆಯ್ತು. ಏನು ಕೆಲಸ ಮಾಡಿದ್ದಾರೆ ? ನಾನು ದೇವೇಗೌಡರು ನಾವು ಮಾಡಿದ ಕೆಲಸಕ್ಕೆ ಕಲ್ಲು ನೆಡುವ ಕೆಲಸಮಾಡಿದ್ದರೆ ಎಲ್ಲ ಗ್ರಾಮಗಳಲ್ಲೂ ಕಲ್ಲಿನ ಮೇಲೆ ನಮ್ಮ ಹೆಸರು ಹಾಕಿಸಬಹುದಿತ್ತು .ಆದರೆ ನಾನು ಪ್ರಚಾರಕ್ಕಾಗಿ ಕೆಲಸ ಮಾಡಿಲ್ಲ ಎಂದರು.
ಜನ ಬಂದು ಹಲವು ಮನವಿ ಸಲ್ಲಿಸಿದ್ದು ಪರಿಶೀಲನೆ ಮಾಡ್ತೇನೆ. ನಿಖಿಲ್ ಸೋಲಿಸಿದ್ದೀರಿ ಅಂತ ನಿಮ್ಮ ಅರ್ಜಿ ಬಿಸಾಡುವುದಿಲ್ಲ. ನಾವು ಇದಕ್ಕೆ ಹೆದರಿ ಕೂರುವವರೂ ಅಲ್ಲ. ನಮ್ಮ ಕೆಲಸವನ್ನ ನಾವು ಪ್ರಾಮಾಣಿಕವಾಗಿ ಮಾಡ್ತೇವೆ. ರಾಜ್ಯದ ಹಲವೆಡೆ ರಾಗಿ ಖರೀದಿ ಕೇಂದ್ರ ತೆರೆದಿಲ್ಲ. ರಾಜ್ಯ ಸರ್ಕಾರ ಚೀಲ ಖರೀದಿ ಮಾಡಿಲ್ಲ ಅಂತ ಸಬೂಬು ಹೇಳ್ತಾರೆ. ನನಗೆ ಸಾಕಷ್ಟು ಆರೋಗ್ಯ ಸಮಸ್ಯೆ ಇದೆ. ಇನ್ನೂ ಒಂದು ವಾರ ಆಸ್ಪತ್ರೆಯಲ್ಲೇ ಇರಬೇಕಾಗಿತ್ತು. ಆದರೆ ನಿಮ್ಮ ಮೇಲಿನ ಗೌರವಕ್ಕೆ ಇಲ್ಲಿ ಬಂದಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಕೂರು ಸಹಕಾರ ಸಂಘದ ಅಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ಮುಖಂಡರಾದ ಬೋರ್‌ವೆಲ್ ರಾಮಚಂದ್ರು, ಎಲೇಕೇರಿ ರವೀಶ್, ಇಗ್ಗಲೂರು ಶ್ರೀನಿವಾಸ್ ಇತರರಿದ್ದರು.
ಕಾರ್ಖಾನೆಗೆ ಪ್ರಪೋಸಲ್ ನೀಡಬೇಕುಜನ ರಾಜ್ಯದಲ್ಲಿ ಹೊಸ ಕಾರ್ಖಾನೆ ತೆರೆಯುವಂತೆ ಮನವಿ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಕಾರ್ಖಾನೆ ತರಲು ಇವರು ಪ್ರಪೋಸಲ್ ಕೊಡಬೇಕು. ನಾವೇ ಪ್ರಪೋಸಲ್ ತರಲು ಆಗಲ್ಲ. ಸಾಕಷ್ಟು ಕಾರ್ಖಾನೆಗಳು ಬೇರೆ ರಾಜ್ಯದ ಪಾಲಾಗುತ್ತಿವೆ. ಆಂಧ್ರದಲ್ಲಿ ಕಾರ್ಖಾನೆ ಮರು ನಿರ್ಮಾಣ ಮಾಡಿದ್ದೇವೆ. ಅದರಿಂದ 25 ಸಾವಿರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈ ಕಾರಣಕ್ಕೆ ಅಲ್ಲಿ ಏರ್ಪೋರ್ಟ್ ನಿಂದ ಮೆರವಣಿಗೆ ಮಾಡಿ, ಹಾಲಿನ ಅಭಿಷೇಕ ಮಾಡಿದರು. ಎಚ್‌ಎಂಟಿ ಕಾರ್ಖಾನೆಗೆ ಪುನರ್ಜನ್ಮ ಕೊಡುವ ಕೆಲಸ ಆಗ್ತಿದೆ. ಕುದುರೆಮುಖ ಕಾರ್ಖಾನೆಗೆ ಹಣ ಕೊಟ್ಟರೆ ಇವರು ಅದನ್ನೂ ಸಹಿಸಲಿಲ್ಲ. ಇದು ಈ ಸರ್ಕಾರ ಯಾವ ರೀತಿ ನಡೆಯುತ್ತಿದೆ ಅನ್ನೋದರ ಪರಿಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ಅದೇನೋ ಮೇಕೆದಾಟು, ಮೇಕೆದಾಟು ಅಂತಾರೆ. ಈಗ ನಟ್ಟು, ಬೋಲ್ಟು ಟೈಟ್ ಅಂತಾರೆ. ನಿಮಗೆ ೧೩೬ ಜನ ಕೊಟ್ಟಿರೋದು ಏಕೆ.? ಮೇಕೆದಾಟು ಮಾಡೋದಕ್ಕಲ್ವಾ ಮಾಡಿ. ನಿಮ್ಮ ಪಾರ್ಟ್‌ನರ್ ಪಾರ್ಟಿ ಡಿಎಂಕೆ ತಮಿಳುನಾಡಿನಲ್ಲಿ ಸರ್ಕಾರ ನಡೆಸುತ್ತಿದೆ. ಮೊದಲು ಅಲ್ಲಿ ಅನುಮತಿ ತೆಗೆದುಕೊಂಡು ಬನ್ನಿ. ೧೦ ನಿಮಿಷದಲ್ಲಿ ಪ್ರಧಾನಿಗಳ ಬಳಿ ನಾನು ಪರ್ಮಿಷನ್ ಕೊಡಿಸ್ತೀನಿ.
-ಕುಮಾರಸ್ವಾಮಿ, ಕೇಂದ್ರ ಸಚಿವರು