ಮಂಜುನಾಥ ಮೇಗೂರು ಅಧ್ಯಕ್ಷರಾಗಿ ಐದು ತಿಂಗಳಲ್ಲಿಯೇ ಇವರ ಆಡಳಿತ ವೈಖರಿಗೆ ರೋಸಿ ಹೋಗಿ ನೌಕರರು ಪ್ರತಿಭಟನೆ ನಡೆಸಿದ್ದರಿಂದ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರಕ್ಕೀಡಾಯಿತು.

ಕಾರಟಗಿ: ಇಲ್ಲಿನ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ ದುಂಡಾವರ್ತನೆ, ಆಡಳಿತ ವಿರೋಧಿ ನೀತಿ ವಿರೋಧಿಸಿ ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಹಾಗೂ ಸಿಬ್ಬಂದಿ, ಪೌರ ನೌಕರರು ಬುಧವಾರ ಪುರಸಭೆ ಮುಂದೆ ದಿಢೀರ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಾರಟಗಿ ಪುರಸಭೆ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ವಿರುದ್ಧ ನೌಕರರು ಮತ್ತು ಅಧಿಕಾರಿಗಳು ಸೇರಿ ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದು ಇದೇ ಮೊದಲು.

ಮಂಜುನಾಥ ಮೇಗೂರು ಅಧ್ಯಕ್ಷರಾಗಿ ಐದು ತಿಂಗಳಲ್ಲಿಯೇ ಇವರ ಆಡಳಿತ ವೈಖರಿಗೆ ರೋಸಿ ಹೋಗಿ ನೌಕರರು ಪ್ರತಿಭಟನೆ ನಡೆಸಿದ್ದರಿಂದ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರಕ್ಕೀಡಾಯಿತು.

ಹಲವು ದಿನಗಳಿಂದ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳ ನಡುವೆ ಇದ್ದ ಶೀತಲ ಸಮರ ಬುಧವಾರ ಬೆಳಗ್ಗೆ ಏಕಾಏಕಿ ಸ್ಫೋಟಗೊಂಡು ಪ್ರತಿಭಟನೆ ನಡೆಸುವ ಹಂತಕ್ಕೆ ಬಂದು ತಲುಪಿತು. ಜತೆಗೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್ ಪ್ರತಿಭಟನೆ ನಡೆಸುವ ಮುನ್ನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಗಮನಕ್ಕೆ ದೂರವಾಣಿ ಮೂಲಕ ವಿವರಿಸಿದರು. ಜತೆಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಮ್ಮನ್ನು ಪ್ರಭಾರಿ ಮುಖ್ಯಾಧಿಕಾರಿ ಹುದ್ದೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

ಆಕ್ರೋಶ: ಬುಧವಾರ ಬೆಳಗ್ಗೆ ದಿಢೀರ್‌ನೆ ಕಚೇರಿ ಮುಂದೆ ಸಿಬ್ಬಂದಿ, ಪೌರ ನೌಕರರು ಸೇರಿದಂತೆ ಮುಖ್ಯಾಧಿಕಾರಿ ಡಾ.ಕಟ್ಟೆಕಾರ ಅವರು ಡಾ. ಅಂಬೇಡ್ಕರ್ ಮತ್ತು ಗಾಂಧೀಜಿ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿ ಅಧ್ಯಕ್ಷರಿಗೆ ಧಿಕ್ಕಾರ ಕೂಗಿದರು.

ಉಸ್ತುವಾರಿ ಸಚಿವ ಶಿವರಾಜ ತಂಗಡಗಿಗೆ ಕಪ್ಪುಚುಕ್ಕೆಯಾಗಿರುವ ಮೇಗೂರು ಪುರಸಭೆಯಲ್ಲಿ ದುರಾಡಳಿತ ನಡೆಸಿದ್ದು, ಕಚೇರಿ ಕೆಲಸಗಳಿಗೆ ಸಾಕಷ್ಟು ಅಡ್ಡಿಯಾಗಿದ್ದಾರೆ. ಇವರಿಂದ ಜನಸಾಮಾನ್ಯರ ಕೆಲಸಕ್ಕೆ ಅಡ್ಡಿಯಾಗಿದೆ, ಅನ್ಯಾಯವಾಗುತ್ತಿದೆ, ನಿಷ್ಠಾವಂತ ಅಧಿಕಾರಿಗಳ ರಕ್ಷಣೆಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಹೈಡ್ರಾಮಾ:ಪುರಸಭೆ ಮುಂದೆ ಪ್ರತಿಭಟನೆ ನಡೆಯುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಉಸ್ತುವಾರಿ ಸಚಿವರ ಕಚೇರಿಯ ಆಪ್ತ ಸಹಾಯಕ ಇನಾಯತ್ ಖಾನ್, ಯುವ ಮುಖಂಡ ಮಹೇಶ ಕಂದಗಲ್ ದೌಡಾಯಿಸಿ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್ ಇವರನ್ನು ಮನವೋಲಿಸಲು ಪ್ರಯತ್ನಿಸಿದರು.

ಇದು ಯಾವುದಕ್ಕೂ ಜಗ್ಗದ ಕಟ್ಟೇಕಾರ ನೀವ್ಯಾರೂ ನಮಗೆ ತಿಳಿ ಹೇಳುವ ಅವಶ್ಯಕತೆ ಇಲ್ಲ. ನಾನು ಈಗಾಗಲೇ ಡಿಸಿ ಗಮನಕ್ಕೆ ತಂದಿದ್ದು, ಮನೆ ಸಹ ಖಾಲಿ ಮಾಡುತ್ತಿರುವೆ. ಅಧ್ಯಕ್ಷ ಮೇಗೂರು ಒಬ್ಬ ಗೂಂಡಾ, ಪುರಸಭೆಗೆ ಕಾಲಿಡಲು ನಾಲಾಯಕ್ ಮನುಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಶಿವರಾಜ ತಂಗಡಗಿ ದೂರವಾಣಿಯ ಮೂಲಕ ಕಟ್ಟೇಕಾರನ್ನು ಸಂಪರ್ಕಿಸಿ ಸಧ್ಯ ಪ್ರತಿಭಟನೆ ಕೈಬಿಡುವಂತೆ ಸೂಚಿಸಿದ್ದರಿಂದ ಪ್ರತಿಭಟನೆ ಹಿಂಪಡೆದರು.