ಜಿಲ್ಲೆಯ ಒಟ್ಟು 9,51,985 ಮತದಾರರ ವಿವರಗಳನ್ನು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ತಂತ್ರಾಂಶದಲ್ಲಿ ಯಶಸ್ವಿಯಾಗಿ ದಾಖಲಿಸಲಾಗಿದೆ. ಈ ಪೈಕಿ 1,17,519 ಮತದಾರರ ವಿವರಗಳ ಪರಿಶೀಲನೆ ಮತ್ತು ಪರಿಷ್ಕರಣೆ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಆರಂಭದಿಂದಲೂ ಮುಂಚೂಣಿಯನ್ನು ಕಾಯ್ದುಕೊಂಡಿದ್ದು, ಇದುವರೆಗೆ 9,51,985 ಮತದಾರರ ಮಾಹಿತಿಯನ್ನು ಆನ್‌ಲೈನ್ ಮೂಲಕ ಗಣಕೀಕರಣ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ.89ರಷ್ಟು ಪ್ರಗತಿ ಸಾಧಿಸಲಾಗಿದ್ದು, ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಆರಂಭದಿಂದಲೇ ಚುರುಕುಗೊಂಡಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಕ್ರಿಯಾಶೀಲ ಕಾರ್ಯನಿರ್ವಹಣೆ, ಬಿಎಲ್‌ಎ-2 ರಾಜಕೀಯ ಪ್ರತಿನಿಧಿಗಳ ಸಹಕಾರ ಹಾಗೂ ಜಿಲ್ಲೆಯ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯಿಂದ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯ ಒಟ್ಟು 9,51,985 ಮತದಾರರ ವಿವರಗಳನ್ನು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ತಂತ್ರಾಂಶದಲ್ಲಿ ಯಶಸ್ವಿಯಾಗಿ ದಾಖಲಿಸಲಾಗಿದೆ. ಈ ಪೈಕಿ 1,17,519 ಮತದಾರರ ವಿವರಗಳ ಪರಿಶೀಲನೆ ಮತ್ತು ಪರಿಷ್ಕರಣೆ ಕಾರ್ಯವು ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.ಪರಿಷ್ಕರಣೆ ಹಂತದಲ್ಲಿರುವ 1,17,519 ಮತದಾರರ ಪೈಕಿ 72,694 ಮತದಾರರು ಬೇರೆ ಸ್ಥಳಗಳಿಗೆ ವಲಸೆ ಹೋಗಿರುವುದು ಕಂಡುಬಂದಿದೆ. ಅಲ್ಲದೆ, 28,368 ಮತದಾರರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. 7,050 ಮತದಾರರು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ನೋಂದಣಿಯಾಗಿರುವುದು ಪರಿಶೀಲನೆಯ ವೇಳೆ ಪತ್ತೆಯಾಗಿದೆ. ಉಳಿದ 7,253 ಮತದಾರರ ಮಾಹಿತಿ ಸಂಗ್ರಹಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದು, ಅವರ ವಿವರಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯು ನಿಖರ, ದೋಷರಹಿತ ಹಾಗೂ ಸಮಗ್ರವಾಗಿರಬೇಕು ಎಂಬ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಮತದಾರರು ನೀಡಿರುವ ಗಣತಿ ನಮೂನೆಗಳಲ್ಲಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಿದ್ದು, ಈವರೆಗೆ ನಮೂನೆ ಸಲ್ಲಿಸಿರುವ ಎಲ್ಲ ಮತದಾರರ ಮಾಹಿತಿಯನ್ನು ಗಣಕೀಕರಣ ಮಾಡುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಇನ್ನೂ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಭಾಗವಹಿಸದೆ ಬಾಕಿ ಉಳಿದಿರುವ ಮತದಾರರ ವಿವರಗಳನ್ನು ಸಂಗ್ರಹಿಸಲು ಹಾಗೂ ಅಗತ್ಯ ಗಣಕೀಕರಣ ಮತ್ತು ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಜುಲೈ 29ರಿಂದ ಆಗಸ್ಟ್ 8 ರವರೆಗೆ ಎರಡನೇ ಸುತ್ತಿನ ಮನೆ ಮನೆ ಭೇಟಿ ಹಾಗೂ ಮರುಪರಿಶೀಲನೆ ಕಾರ್ಯವನ್ನು ಆರಂಭಿಸಲಾಗುವುದು, ಈ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜುಲೈ 28ರಂದು ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎರಡನೇ ಸುತ್ತಿನ ಮರುಪರಿಶೀಲನೆಯ ಸಂದರ್ಭದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಬಾಕಿ ಇರುವ ಮತದಾರರ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಹೇಳಿದರು.
ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರೂ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ಜಿಲ್ಲೆಯ ಮತದಾರರ ಪಟ್ಟಿಯನ್ನು ಸಂಪೂರ್ಣ, ನಿಖರ ಹಾಗೂ ದೋಷರಹಿತವಾಗಿಸಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್.ಎಂ.ಆರ್., ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಬಿಜೆಪಿಯ ಲಕ್ಷ್ಮೀನಾರಾಯಣಗುಪ್ತ, ಸಿಪಿಐನ ಬಿ.ಎನ್.ಮುನಿಕೃಷ್ಣ, ಕಾಂಗ್ರೆಸ್ ನ ಮಧುಸೂಧನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.