ಚಿಕ್ಕಬಳ್ಳಾಪುರ : ಬೆಂಗಳೂರಿನ ಬಳಿಕ ಈಗ ಚಿಕ್ಕಬಳ್ಳಾಪುರ ತಾಲೂಕಿನ ಖಾಸಗಿ ಕಾಲೇಜೊಂದರಲ್ಲಿಯೂ ಸಿಇಟಿ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಖಾಸಗಿ ಕಾಲೇಜೊಂದರ ಸಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗುರುವಾರ ಪರೀಕ್ಷೆಗೆ ಹಾಜರಾದ ಕೆಲ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಲು ಸೂಚಿಸಿದ ಘಟನೆ ನಡೆದಿದ್ದು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ನಡುವೆಯೇ, ಚಿಕ್ಕಬಳ್ಳಾಪುರ ತಾಲೂಕಿನ ನಾಗಾರ್ಜುನ ಕಾಲೇಜಿನಲ್ಲಿ ಗುರುವಾರ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಎಸೆದಿರುವ ಘಟನೆ ನಡೆದಿದೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲು ವಿದ್ಯಾರ್ಥಿ, ಆತನ ತಾಯಿ ಮತ್ತು ಬ್ರಾಹ್ಮಣ ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ಚಿಂತಾಮಣಿಯ ವಿದ್ಯಾರ್ಥಿ ಸುಪ್ರೀತ್ ಕೆ.ಆರ್ ಜನಿವಾರ ಕತ್ತರಿಸಲಾಗಿದೆ
ಜಿಲ್ಲೆಯ ಚಿಂತಾಮಣಿಯ ವಿದ್ಯಾರ್ಥಿ ಸುಪ್ರೀತ್ ಕೆ.ಆರ್., ಏಪ್ರಿಲ್ 23ರ ಗುರುವಾರದಂದು ಸಿಇಟಿ ಬರೆಯಲು ನಾಗಾರ್ಜುನ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್‌ಗೆ ಆತನ ತಾಯಿ ವಾಣಿ, ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ವಾಣಿ, ಜನಿವಾರ ಕತ್ತರಿಸಿದ್ದರಿಂದ ತಮ್ಮ ಪುತ್ರ ವಿಚಲಿತನಾಗಿದ್ದು, ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ, ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ, ಇಲ್ಲವೇ ಗ್ರೇಸ್ ಅಂಕ ನೀಡಿ ಸಹಾಯ ಮಾಡಲಿ ಎಂದು ಮನವಿ ಮಾಡಿದ್ದಾರೆ.
ಸುಪ್ರೀತ್ ಮಾತನಾಡಿ, ನಾನೇ ತೆಗೆದು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರೂ ಅಧಿಕಾರಿಗಳು ಕೇಳಲಿಲ್ಲ. ಜನಿವಾರ ತೆಗೆಯುವುದಕ್ಕೂ ಅವಕಾಶ ನೀಡಲಿಲ್ಲ. ಕತ್ತರಿಯಿಂದ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಹಾಕಿದರು. ಪರೀಕ್ಷೆ ಮುಗಿದ ಮೇಲೆ ಕಸದ ಬುಟ್ಟಿಯಲ್ಲಿ ಜನಿವಾರ ಹುಡುಕಾಡಿ ತೆಗೆದುಕೊಂದು ಬಂದೆ. ನನ್ನ ತಂದೆ ಮೃತಪಟ್ಟು ಒಂದು ವರ್ಷ ಆಗಿದೆ. 8 ದಿನಗಳ ಹಿಂದೆ ನನಗೆ ಉಪನಯನವಾಗಿತ್ತು. ಜನಿವಾರ ಕತ್ತರಿಸಿದ ಕಾರಣ ಒತ್ತಡಕ್ಕೆ ಒಳಗಾಗಿ ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲ. ದ್ವಿತೀಯ ಪಿಯುನಲ್ಲಿ ಪಿಸಿಎಂಬಿ ವಿಷಯದಲ್ಲಿ ಶೇ.90ರಷ್ಟು ಅಂಕ ತೆಗೆದಿದ್ದೇನೆ. ನಮಗೆ ಮೊದಲೇ ಈ ಬಗ್ಗೆ ಹೇಳಿರಲಿಲ್ಲ. ನಿಯಮಾವಳಿಯಲ್ಲೂ ಜನಿವಾರ ಹಾಕಿಕೊಂಡು ಬರಬಾರದು ಅಂತ ಹೇಳಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ಅವಮಾನ ತಪ್ಪಿಸಲು ಕಾಯ್ದೆ ತನ್ನಿ
ಬ್ರಾಹ್ಮಣರ ಜನಿವಾರಕ್ಕೆ ಕೈ ಹಾಕಿದ ಅಧಿಕಾರಿಗಳು ಮುಂದೆ ಪರಮ ಪವಿತ್ರವಾದ ಮಂಗಳಸೂತ್ರಕ್ಕೂ ಕೈ ಹಾಕುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಅಧಿಕಾರಿಗಳ ನಿರ್ಲಕ್ಷ್ಯದಿಂದ ಪದೇಪದೇ ಇಂತಹ ತಪ್ಪುಗಳಾಗುತ್ತಿದ್ದು, ಸರ್ಕಾರ ಅವಮಾನ ಎದುರಿಸುವಂತಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ ಬ್ರಾಹ್ಮಣ ಸಮುದಾಯಕ್ಕೆ ಶಾಶ್ವತ ಪರಿಹಾರ ನೀಡಬೇಕು.
ಡಾ.ಶಂಕರ್ ಗುಹ ದ್ವಾರಕಾನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ
