ಸಾರಾಂಶ
ಕಲಬುರಗಿ ಮೂಲದ ಮಕಾಂದರ್, 2025ರ ಜೂನ್‌ನಲ್ಲಿ ಅತಿಥಿ ಶಿಕ್ಷಕರಾಗಿ ಈ ಶಾಲೆಗೆ ಸೇರಿಕೊಂಡಿದ್ದರು. ಆದರೆ, ಕಳೆದ ಕೆಲ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ದೈಹಿಕ ಶಿಕ್ಷೆ ನೀಡುವುದು, 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಜನಿವಾರ ಮತ್ತು ಕೈದಾರ ತೆಗೆಯಲು ಸೂಚಿಸುವುದು ಸೇರಿದಂತೆ ಹಲವು ಆರೋಪಗಳು ಮಕ್ಕಳಿಂದ ಹಾಗೂ ಪೋಷಕರಿಂದ ಕೇಳಿಬಂದಿವೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಸಿದ ಆರೋಪದ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮದರಶಾ ಎಸ್. ಮಕಾಂದರ್ ಅವರನ್ನು ಸೋಮವಾರ ಶಾಲಾ ಕರ್ತವ್ಯದಿಂದ ವಜಾಗೊಳಿಸಿದ ಘಟನೆ ನಡೆದಿದೆ.ಕಲಬುರಗಿ ಮೂಲದ ಮಕಾಂದರ್, 2025ರ ಜೂನ್‌ನಲ್ಲಿ ಅತಿಥಿ ಶಿಕ್ಷಕರಾಗಿ ಈ ಶಾಲೆಗೆ ಸೇರಿಕೊಂಡಿದ್ದರು. ಆದರೆ, ಕಳೆದ ಕೆಲ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ದೈಹಿಕ ಶಿಕ್ಷೆ ನೀಡುವುದು, 200 ಬಸ್ಕಿ ಹೊಡೆಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಜನಿವಾರ ಮತ್ತು ಕೈದಾರ ತೆಗೆಯಲು ಸೂಚಿಸುವುದು ಸೇರಿದಂತೆ ಹಲವು ಆರೋಪಗಳು ಮಕ್ಕಳಿಂದ ಹಾಗೂ ಪೋಷಕರಿಂದ ಕೇಳಿಬಂದಿವೆ.ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸ್ಥಳೀಯರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಮಕಾಂದರ್‌ಗೆ ಈ ಮೊದಲು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ವರ್ತನೆಯಲ್ಲಿ ಯಾವುದೇ ಬದಲಾವಣೆ ಬಾರದ ಕಾರಣ, ಪೋಷಕರ ಆಕ್ರೋಶದ ನಡುವೆ ಪ್ರಾಂಶುಪಾಲರು ಅವರನ್ನು ತಕ್ಷಣವೇ ವಜಾಗೊಳಿಸಿದರು.ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆ ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಿರುವ ಸಂಸ್ಥೆಯಾಗಿದೆ. ಹಲವು ಪ್ರದೇಶಗಳಿಂದ ಮಕ್ಕಳಿದ್ದು, ಇಲ್ಲಿ ಸರ್ವಧರ್ಮ ಸೌಹಾರ್ದತೆ ಬೆಳೆದು ಬಂದಿದೆ. ಆದರೆ ಶಿಕ್ಷಕ ಮಕಾಂದರ್ ಅವರ ವರ್ತನೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಅನಗತ್ಯ ಒತ್ತಡ ಹಾಗೂ ಅಸುರಕ್ಷತೆ ಉಂಟುಮಾಡಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.ಜನಿವಾರ ಎಂದರೆ ಏನು ಎಂಬುದೇ ಗೊತ್ತಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ ಎಂಬುದು ಪೋಷಕರ ಕೋಪವನ್ನು ಮತ್ತಷ್ಟು ಹೆಚ್ಚಿಸಿತು. ಮಿಯ್ಯಾರಿನಲ್ಲಿ ಸರ್ವಧರ್ಮೀಯರು ಒಗ್ಗಟ್ಟಿನಿಂದ ಬದುಕುತ್ತಿದ್ದು, ಈ ರೀತಿಯ ವರ್ತನೆ ಸಮುದಾಯಗಳ ನಡುವೆ ಒಡಕು ಸೃಷ್ಟಿಸಬಲ್ಲದು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಸ್ಥಳೀಯರು ಕಿಡಿಕಾರಿದ್ದಾರೆ.ಶಾಲಾ ಆಡಳಿತದಿಂದ ಶಿಕ್ಷಕನ ವಜಾ ಕ್ರಮಕ್ಕೆ ಪೋಷಕರು ತೃಪ್ತಿ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಧಾರ್ಮಿಕ ಗೌರವ ಕಾಪಾಡುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
;Resize=(128,128))
;Resize=(128,128))
;Resize=(128,128))