ಚಿಕ್ಕಸಂಗಮ ಪ್ರವಾಸಿ ತಾಣಕ್ಕೆ ಯೋಗ್ಯ

| Published : Oct 03 2025, 01:07 AM IST

ಸಾರಾಂಶ

ಪ್ರವಾಸಿ ತಾಣವಾಗಲು ಚಿಕ್ಕಸಂಗಮ ಯೋಗ್ಯವಾದ ಸ್ಥಳ. ರೋಪ್‌ ವೇ, ಬೋಟಿಂಗ್, ನೇಚರ್ ಕ್ಯಾಂಪ್‌ಗಾಗಿ ಶೀಘ್ರ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಿ ಕೊಡಿ

ಕನ್ನಡಪ್ರಭ ವಾರ್ತೆ ಬೀಳಗಿ

ಪ್ರವಾಸಿ ತಾಣವಾಗಲು ಚಿಕ್ಕಸಂಗಮ ಯೋಗ್ಯವಾದ ಸ್ಥಳ. ರೋಪ್‌ ವೇ, ಬೋಟಿಂಗ್, ನೇಚರ್ ಕ್ಯಾಂಪ್‌ಗಾಗಿ ಶೀಘ್ರ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಿ ಕೊಡಬೇಕೆಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಅವರು ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಸೂಚಿಸಿದರು.

ತಾಲೂಕಿನ ಚಿಕ್ಕಸಂಗಮದ ಸಂಗಮನಾಥ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿ, ಪಿಪಿಪಿ ಮಾದರಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ದೀಪಾವಳಿ ಹಬ್ಬ ಅಥವಾ ನವೆಂಬರ್ ೧ ರಂದು ಬೋಟಿಂಗ್ ಪ್ರಾರಂಭಿಸೋಣ. ಮೂರು ತಿಂಗಳೊಳಗೆ ಕೆಲಸ ಮುಗಿಸಿದರೆ ನಾನೇ ಬಂದು ಚಾಲನೆ ಕೊಡುವೆ ಎಂದು ಭರವಸೆ ನೀಡಿದರು.

ಶಾಸಕ ಜೆ.ಟಿ.ಪಾಟೀಲರು ₹೫೦ ಲಕ್ಷ ಅನುದಾನ ಕೊಟ್ಟರೆ, ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಕೊಟ್ಟು ೩ ತಿಂಗಳಲ್ಲಿ ಕೆಲಸ ಮಾಡೋಣ. ಇದರಿಂದ ಸುಂದರವಾದ ತಾಣವಾಗಲು ಸಾಧ್ಯವಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರಿಗಾಗಿ ೨೦ ಕೋಣೆಗಳ ಯಾತ್ರಿ ನಿವಾಸವನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಗಟ್ಟಿಧ್ವನಿ, ಶಾಸಕ ಜೆ.ಟಿ.ಪಾಟೀಲರ ದಿಟ್ಟತನದಿಂದ ಸಚಿವ ಸಂಪುಟದಲ್ಲಿ ಯುಕೆಪಿ ೩ನೇ ಹಂತದಲ್ಲಿ ಮುಳುಗಡೆಯಾಗಲಿರುವ ನೀರಾವರಿ ಭೂಮಿಗೆ ₹೪೦ ಲಕ್ಷ, ಒಣಬೇಸಾಯಕ್ಕೆ ₹೩೦ ಲಕ್ಷ ಬೆಲೆ ನಿಗದಿ ಮಾಡಲು ಸಾಧ್ಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ ಮಾತನಾಡಿ, ಮುಳುಗಡೆ ಸಂತ್ರಸ್ತರ ಶಾಂತಿಯುತ ಹೋರಾಟ ದೇಶಕ್ಕೆ ಮಾದರಿ. ಶಾಂತಿಯುತ ಹೋರಾಟದಿಂದ ಪ್ರತಿಫಲ ದೊರೆಯಲು ಸಾಧ್ಯವಾಯಿತು. ಚಿಕ್ಕಸಂಗಮವನ್ನು ಪ್ರವಾಸಿ ತಾಣವಾಗಿ ಬೆಳೆಸಿದರೆ ದೇಶ, ವಿದೇಶದಿಂದ ಪ್ರವಾಸಿಗರು ಬರುತ್ತಾರೆ ಎಂದರು.

ಶಾಸಕ ಜೆ.ಟಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಮಂತ್ರಿಗಳಾಗಿದ್ದ ಎಚ್.ಕೆ. ಪಾಟೀಲರು, ತೆಗ್ಗಿ, ಸಿದ್ದಾಪೂರ, ಸೊನ್ನ, ಮನ್ನಿಕೇರಿ ಏತ ನೀರಾವರಿ ಹಾಗೂ ಕೋಲ್ಹಾರ ಸೇತುವೆ ಮಂಜೂರಿ ಮಾಡಿದ್ದರು. ಅಲ್ಲದೆ, ₹೩.೫ ಕೋಟಿ ಅನುದಾನದಲ್ಲಿ ಚಿಕ್ಕಸಂಗಮ ಕ್ಷೇತ್ರ ಅಭಿವೃದ್ಧಿ ಹೊಂದಿದ ಬಳಿಕ ೧ ಪೈಸೆ ಕೂಡ ಅನುದಾನ ಬಂದಿಲ್ಲ ಎಂದು ಹೇಳಿದರು.

ಸದ್ಯ ₹೨ ಕೋಟಿ ಅನುದಾನ ಬಂದಿದ್ದು ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಇನ್ನಷ್ಟೇ ಟೆಂಡರ್‌ ಕರೆಯಬೇಕಿದೆ. ನಮ್ಮ ಸರ್ಕಾರ ಇಲ್ಲಿ ಬಾಂದಾರ ಸಹಿತ ಸೇತುವೆ ನಿರ್ಮಾಣ ಮಾಡಲು ₹೨೫ ಕೋಟಿ ಅನುದಾನ ನೀಡಿದ್ದು, ಸೇತುವೆ ನಿರ್ಮಾಣದ ಬಳಿಕ ೧೨ ತಿಂಗಳು ಬೋಟಿಂಗ್ ಮಾಡಲು, ಚಿಕ್ಕಸಂಗಮದಿಂದ ಕನಕೇಶ್ವರ ದೇವಾಲಯವದವರೆಗೆ ಇಲೆಕ್ಟ್ರಿಕಲ್ ರೋಪ್‌ ವೇ, ೧೬೦ ಎಕರೆ ಅರಣ್ಯವಿದ್ದು, ಅದರಲ್ಲಿ ಮಂಗಲ ಕಾರ್ಯಾಲಯ, ಜಂಗಲ್ ರೇಸಾರ್ಟ್‌ ಮಾಡಿಕೊಡಬೇಕೆಂದು ಪ್ರವಾಸೋದ್ಯಮ ಸಚಿವರಿಗೆ ಶಾಸಕರು ಬೇಡಿಕೆ ಸಲ್ಲಿಸಿದರು.

ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಸಂಗಪ್ಪ ಎಂ., ಜಿಪಂ ಸಿಇಒ ಶಶಿಧರ ಕುರೇರ, ಎಸ್‌ಪಿ ಸಿದ್ದಾರ್ಥ ಗೋಯಲ್, ಮುಖಂಡರಾದ ಬಸವಪ್ರಭು ಸರನಾಡಗೌಡ, ಮುತ್ತು ದೇಸಾಯಿ, ಎಸಿ ಶ್ವೇತಾ ಬೀಡಿಕರ, ತಹಶೀಲ್ದಾರ ವಿನೋದ ಹತ್ತಳ್ಳಿ ಮತ್ತಿತರಿದ್ದರು.