ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆಟವಾಡುತ್ತಿದ್ದ ಮಗು ಅಪಹರಣ ಪ್ರಕರಣ ಸುಖಾಂತ್ಯ : ರವಿ ಹರಿಜನ ವಶಕ್ಕೆ

| Published : Nov 25 2024, 01:04 AM IST / Updated: Nov 25 2024, 12:51 PM IST

Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆಟವಾಡುತ್ತಿದ್ದ ಮಗು ಅಪಹರಣ ಪ್ರಕರಣ ಸುಖಾಂತ್ಯ : ರವಿ ಹರಿಜನ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

 ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆಟವಾಡುತ್ತಿದ್ದ ಮಗುವೊಂದನ್ನು ಅಪಹರಿಸಿದ್ದ ಪ್ರಕರಣ ಶನಿವಾರ ನಡೆದಿದ್ದು, ಭಾನುವಾರ ಈ ಪ್ರಕರಣ ಸುಖಾಂತ್ಯಗೊಂಡಿದೆ. 

 ವಿಜಯಪುರ:  ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆಟವಾಡುತ್ತಿದ್ದ ಮಗುವೊಂದನ್ನು ಅಪಹರಿಸಿದ್ದ ಪ್ರಕರಣ ಶನಿವಾರ ನಡೆದಿದ್ದು, ಭಾನುವಾರ ಈ ಪ್ರಕರಣ ಸುಖಾಂತ್ಯಗೊಂಡಿದೆ. ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಹಿಪ್ಪರಗಿ ಮೂಲದ ರವಿ ಹರಿಜನ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಬಳಯಿದ್ದ ಮಗುವನ್ನು ತಾಯಿಗೆ ಹಸ್ತಾಂತರಿಸಿದ್ದಾರೆ. ಶನಿವಾರ ಮಗುವನ್ನು ಕಳೆದುಕೊಂಡು ಗೋಳಾಡುತ್ತಿದ್ದ ತಾಯಿ ಇಂದು ತನ್ನ ಮಗು ಮಡಿಲು ಸೇರಿದ್ದರಿಂದ ಆನಂದಬಾಷ್ಪ ಸುರಿಸಿ ಖಾಕಿಪಡೆಗೆ ಧನ್ಯವಾದ ಸಲ್ಲಿಸಿದ್ದಾಳೆ.

ಹೇಗಾಯ್ತು ಮಗು ಅಪಹರಣ..?

ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ ರಾಜೇಶ್ವರಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ತನ್ನ ತಾಯಿಗೆ ಅನಾರೋಗ್ಯವಾಗಿದೆ ಎಂದು ವಿಜಯಪುರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಳು. ಈ ವೇಳೆ ಆಸ್ಪತ್ರೆಗೆ ಕರೆ ತಂದಿದ್ದ ತನ್ನ ಮಗುವನ್ನು ಬಿಟ್ಟು ಆಕೆ ಮೆಡಿಕಲ್‌ಗೆ ಶಾಪ್‌ ಔಷಧಿ ತರಲು ಹೋಗಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ಮಗು ಹಠಮಾಡುತ್ತ ಅಳುತ್ತಿತ್ತು. ಈ ವೇಳೆ ರಾಜೇಶ್ವರಿ ತಾಯಿಯ ಬಳಿಗೆ ಬಂದ ವ್ಯಕ್ತಿಯೊಬ್ಬ ಮಗುವನ್ನು ಆಟವಾಡಿಸುವ ನೆಪದಲ್ಲಿ 1 ವರ್ಷದ ಗಂಡು ಮಗುವನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ವಾಪಸ್‌ ಎಷ್ಟು ಹೊತ್ತಾದರೂ ಆತ ಬಾರದ ಹಿನ್ನೆಲೆಯಲ್ಲಿ ಮಗುವಿನ ತಾಯಿ ರಾಜೇಶ್ವರಿ ಗಾಂಧಿಚೌಕ್‌ ಠಾಣೆಗೆ ಮಗು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಆ ಮಗುವನ್ನು ಕರೆದುಕೊಂಡು ಹೋಗಿದ್ದು ಗೊತ್ತಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಕಿಡ್ನಾಪ್ ಆಗಿರುವ ಮಗುವಿನ ಪತ್ತೆಗಾಗಿ ತಂಡ ರಚಿಸಿಕೊಂಡು ಕಾರ್ಯಾಚರಣೆ ಶುರು ಮಾಡಿದ್ದರು.

ತನ್ನ ಮಗುವಿನಂತಿದೆ ಎಂದ ಭೂಪ

ಕುಡುಕ ಮಹಾಶಯನಾದ ಆರೋಪಿ ರವಿ ಎಂಬಾತ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ವೇಳೆ ಈ ಮಗುವನ್ನು ನೋಡಿದ್ದಾನೆ. ಕುಡಿದ ಮತ್ತಿನಲ್ಲಿ ಈ ಮಗು ತನ್ನ ಮಗುವಿನಂತಿದೆ ಎಂದುಕೊಂಡ ಆತ ಆಸ್ಪತ್ರೆಯಲ್ಲಿದ್ದ ಈ 1 ವರ್ಷದ ಗಂಡು ಮಗುವನ್ನು ಜಿಲ್ಲಾಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದಾನೆ. ಪಾನಮತ್ತನಾಗಿಯೇ ಇದ್ದ ಆತ ಮಗುವನ್ನು ಕರೆದುಕೊಂಡು ಬಸ್ ಹತ್ತಿ ಕಲಬುರಗಿ ವರೆಗೂ ಹೋಗಿದ್ದಾನೆ. ನಂತರದಲ್ಲಿ ನಶೆ ಇಳಿದ ಬಳಿಕ ಇದು ತನ್ನ ಮಗು ಅಲ್ಲ ಎಂಬುದು ಆತನಿಗೆ ಗೊತ್ತಾಗಿದೆ. ಶನಿವಾರ ಒಯ್ದಿದ್ದ ಮಗುವನ್ನು ಮತ್ತೆ ಭಾನುವಾರ ಪಾಲಕರಿಗೆ ಒಪ್ಪಿಸಿದರಾಯಿತು ಎಂದು ಆತ ಮತ್ತೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೇ, ಆಸ್ಪತ್ರೆಯ ಆವರಣದಲ್ಲಿಯೇ ಸುತ್ತಾಡಿದ್ದಾನೆ.

 ಅಷ್ಟೊತ್ತಿಗಾಗಲೇ ಮಗುವನ್ನು ಮತ್ತೆ ಹುಡುಕಾಡುತ್ತಿದ್ದ ಪೊಲೀಸರಿಗೆ ವಿಷಯ ಗೊತ್ತಾಗಿ ಸ್ಥಳಕ್ಕೆ ಧಾವಿಸಿದ್ದು, ಮಗುವನ್ನು ರಕ್ಷಿಸಿದ್ದಾರೆ. ಜೊತೆಗೆ ತಾಯಿ ರಾಜೇಶ್ವರಿಯನ್ನು ಸ್ಥಳಕ್ಕೆ ಕರೆಯಿಸಿ ಆಕೆಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂದುವರಿದು ಆತ ನಶೆಯಲ್ಲಿಯೇ ಹೀಗೆ ಮಾಡಿದ್ದಾನಾ ಅಥವಾ ಅಪಹರಣದ ದೃಷ್ಟಿಯಿಂದ ಮಗುವನ್ನು ಕರೆದುಕೊಂಡು ಹೋಗಿದ್ದನಾ ? ಎಂಬುದರ ಬಗ್ಗೆ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.