ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್‌ ಮತ್ತು ಪತ್ರಿಕಾ ಭವನ ಟ್ರಸ್ಟ್‌ ವತಿಯಿಂದ ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದ ಮತ್ತು ಮಕ್ಕಳ ರಕ್ಷಣೆ ಕಾನೂನು ಮಾಹಿತಿ ಕಾರ್ಯಕ್ರಮ

ಮಂಗಳೂರು: ದಂಪತಿ ಅಥವಾ ಏಕ ಪೋಷಕರು ಮಕ್ಕಳನ್ನು ದತ್ತು ಸ್ವೀಕರಿಸಲು ಅವಕಾಶ ಇರುವಂತೆಯೇ ಮಲತಂದೆ ಅಥವಾ ಮಲತಾಯಿ ಕೂಡಾ ತಮ್ಮ ಹಿಂದಿನ ವಿವಾಹದಿಂದ ಜನಿಸಿದ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆಯಬಹುದಾಗಿದ್ದು, ಮಗುವಿನ ಸಂಬಂಧಿಕರು ಕೂಡಾ ದತ್ತು ಸ್ವೀಕಾರ ಮಾಡಬಹುದು ಎಂದು ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಅಶೋಕ್‌ ನೆಕ್ರಾಜೆ ತಿಳಿಸಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್‌ ಮತ್ತು ಪತ್ರಿಕಾ ಭವನ ಟ್ರಸ್ಟ್‌ ವತಿಯಿಂದ ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದ ಮತ್ತು ಮಕ್ಕಳ ರಕ್ಷಣೆ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಮಕ್ಕಳನ್ನು ದತ್ತು ಪಡೆಯಲು ಬಯಸುವವರು ಕನಿಷ್ಟ 2 ವರ್ಷಗಳ ವೈವಾಹಿಕ ಜೀವನ ಪೂರ್ಣಗೊಳಿಸಿರುವ ಜತೆಗೆ ಪೋಷಕರ ವಯಸ್ಸು ಕನಿಷ್ಟ 25 ವರ್ಷಗಳಾಗಿರಬೇಕು. ಮಲತಂದೆ ಅಥವಾ ಮಲತಾಯಿ ದತ್ತು ಸ್ವೀಕಾರದಡಿ ಹಿಂದಿನ ವಿವಾಹದಿಂದ ಜನಿಸಿದ ಮಗುವನ್ನು ಪ್ರಸಕ್ತ ಪತಿ ಅಥವಾ ಪತ್ನಿ ಕಾನೂನು ಬದ್ಧವಾಗಿ ದತ್ತು ಪಡೆಯಬಹುದು. ವಿಚ್ಛೇದನ ಅಥವಾ ಸಂಗಾತಿಯ ಮರಣದ ನಂತರ ಮಗುವಿನ ತಾಯಿ ಅಥವಾ ತಂದೆ ಮರು ವಿವಾಹವಾದಲ್ಲಿ ಹೊಸ ಸಂಗಾತಿಯು ಮಗುವನ್ನು ದತ್ತು ಪಡೆಯಬಹುದು ಎಂದರು.

ಇಂತಹ ದತ್ತು ಸ್ವೀಕಾರಕ್ಕೆ ಜೈವಿಕ ಪೋಷಕರ ಅಗತ್ಯ ಒಪ್ಪಿಗೆ, ಸಂಬಂಧದ ಪುರಾವೆ ಹಾಗೂ ಇತರ ಅಗತ್ಯ ದಾಖಲೆಗಳ್ನು ಸಲ್ಲಿಸಿ ಸಿಎಆರ್‌ಎ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು. ದತ್ತು ನಿಯಮಾವಳಿ ಪ್ರಕಾರ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಅವರಿಂದ ದತ್ತು ಆದೇಶ ಪಡೆಯುವ ಮೂಲಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಾಲ ನ್ಯಾಯ ಕಾಯ್ದೆ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮಗುವನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಶಿಕ್ಷಾರ್ಹ ಅಪರಾಧ ಎಂದರು.

ಪೋಷಕತ್ವ ಯೋಜನೆ: ಕುಟುಂಬಗಳಿಗೆ ಮರು ಸೇರ್ಪಡೆಗೊಳ್ಳಲು ಸಾಧ್ಯವಾಗದ, ದತ್ತು ಮುಕ್ತವಾಗದ ಮತ್ತು ದತ್ತು ಹೋಗಲು ಸಾಧ್ಯವಾಗದ ಮಕ್ಕಳ(7ರಿಂದ 18 ವರ್ಷದೊಳಗಿನ)ನ್ನು ಪೋಷಕತ್ವ ಯೋಜನೆಯ ಮೂಲಕ ಪೋಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ, ಪ್ರೆಸ್‌ಕ್ಲಬ್‌ ಅಧ್ಯಕ್ಷ ಹರೀಶ್‌ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್‌ ನಾಯಕ್‌ ಇಂದಾಜೆ ಇದ್ದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್‌ ಬಿ.ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿದರು.

ಹರೀಶ್‌ ಮೋಟುಕಾನ ನಿರೂಪಿಸಿ, ವಂದಿಸಿದರು.