ಸಾರಾಂಶ
ಮುಂಡರಗಿ: ಪಟ್ಟಣ ಭಾನುವಾರ ಶಿಕ್ಷಕಲೋಕದ ಹಬ್ಬಕ್ಕೆ ಸಾಕ್ಷಿಯಾಯಿತು. ಕೇವಲ ಪ್ರಶಸ್ತಿ ಪ್ರದಾನವಾಗಿರದೇ, ಕಲಿಕೆಯ ಹೊಸ ದಿಗಂತಗಳನ್ನು ತೆರೆದಿಡುವ ಮೂಲಕ ಕಲಾ ಶಿಕ್ಷಣ-ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ್ದ ಮಕ್ಕಳ ಸ್ನೇಹಿ ಶಿಕ್ಷಕ ರಾಜ್ಯ ಪ್ರಶಸ್ತಿ ಸಮಾರಂಭ ಗಮನ ಸೆಳೆಯಿತು.ಆದರ್ಶ ಶಿಕ್ಷಕಿ ದಿವಂಗತ ಕಲಾ ನಿಂಗು ಸೊಲಗಿ ಅವರ ಸ್ಮರಣೆಯಲ್ಲಿ ನಡೆದ ಈ ಕಾರ್ಯಕ್ರಮ, ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿತು. ಇಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರು ಕೇವಲ ವೇದಿಕೆಯ ಮೇಲೆ ನಿಂತು ಭಾಷಣ ಮಾಡಲಿಲ್ಲ. ಬದಲಾಗಿ, ''''''''ನನ್ನ ಅನುಭವ-ನನ್ನ ಮಾತು'''''''' ಎಂಬ ವಿಶಿಷ್ಟ ಸಂವಾದದಲ್ಲಿ ತಮ್ಮ ಹೃದಯವನ್ನೇ ತೆರೆದಿಟ್ಟರು. ಅವರ ಮಾತುಗಳು ಕೇವಲ ಅನುಭವದ ಮಾತಾಗಿರದೇ ಮಕ್ಕಳ ಕಲಿಕಾ ಭವಿಷ್ಯಕ್ಕೆ ಸ್ಫೂರ್ತಿ ನೀಡುವ ಮಾರ್ಗದರ್ಶಿಯಾಗಿದ್ದವು.ಹೊಸ ಬೋಧನೆ: ಉಡುಪಿ ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಉದಯ ಗಾಂವಕರ ಕಲಿಕೆಯನ್ನು ಪಠ್ಯ ಪುಸ್ತಕಕ್ಕಷ್ಟೇ ಸೀಮಿತಗೊಳಿಸದೇ ಸುತ್ತಮುತ್ತಲಿನ ಪರಿಸರ ಮತ್ತು ಆಟದ ಮೂಲಕ ಕಲಿಸುವುದರ ಮಹತ್ವವನ್ನು ಅವರು ಮನಮುಟ್ಟುವಂತೆ ವಿವರಿಸಿದರು. ಅವರ ಮಾತುಗಳು ಶಿಕ್ಷಕರು ಮತ್ತು ಪೋಷಕರಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು.ಇಂಗ್ಲಿಷ್ ಒಂದು ಭಾಷೆ, ಭಯವಲ್ಲ ಎನ್ನುವ ವಿಷಯದ ಮೇಲೆ ವಿಜಯನಗರ ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎಚ್.ಎಂ.ವನಿತಾ ಮಕ್ಕಳಲ್ಲಿ ಇಂಗ್ಲಿಷ್ ಮೇಲಿನ ಭಯ ಹೋಗಲಾಡಿಸಲು ತಾವು ಬಳಸಿದ ವಿಧಾನಗಳನ್ನು ಹಂಚಿಕೊಂಡರು. ಮಕ್ಕಳಲ್ಲಿ ಸೃಜನಾತ್ಮಕ ಬರವಣಿಗೆ ಕುರಿತು ಕೋಲಾರ ಜಿಲ್ಲೆಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿಡ್ಲಘಟ್ಟದ ಎಸ್. ಕಲಾಧರ್ ಅವರು ಮಕ್ಕಳನ್ನು ಸೃಜನಾತ್ಮಕವಾಗಿ ಬರೆಯಲು ಪ್ರೇರೇಪಿಸಿದ ತಮ್ಮ ಯಶಸ್ವಿ ಪ್ರಯೋಗಗಳ ಬಗ್ಗೆ ಮಾತನಾಡಿ, ಬರವಣಿಗೆ ಕೇವಲ ಶಬ್ದಗಳನ್ನು ಜೋಡಿಸುವುದಲ್ಲ, ಅದು ಮಕ್ಕಳಲ್ಲಿ ಸ್ವಂತಿಕೆ, ಆತ್ಮವಿಶ್ವಾಸ ಮತ್ತು ಭಾವನಾತ್ಮಕ ಅಭಿವ್ಯಕ್ತಿಯನ್ನು ಬೆಳೆಸುತ್ತದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕನ್ನಡ ಶಾಲೆಗಳು ಮುಚ್ಚುತ್ತಿರುವ ಕುರಿತು ಆತಂಕ ವ್ಯಕ್ತ ಪಡಿಸಿದರು. ನಿವೃತ್ತ ಡಿಡಿಪಿಐ ಎ.ಎನ್.ನಾಗರಹಳ್ಳಿ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ವಿಶ್ರಾಂತ ಡಿಡಿಪಿಐ ಎಸ್.ಡಿ.ಗಾಂಜಿ, ಬಿಇಒ ಗಂಗಾಧರ ಅಣ್ಣೀಗೇರಿ, ಡಾ. ಅನ್ನದಾನಿ ಮೇಟಿ, ಎಫ್.ಸಿ.ಸಿ. ಚೇಗರಡ್ಡಿ, ಎಂ.ಜಿ.ಗಚ್ಚನ್ನವರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಮುಂಡರಗಿ ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜಗೌಡ ಪಾಟೀಲ ಮಲ್ಲಾಪೂರ, ಈಶ್ವರಪ್ಪ ಹಂಚಿನಾಳ, ಆರ್.ಎಲ್. ಪೊಲೀಸ್ ಪಾಟೀಲ, ಪ್ರಭು ಸೊಪ್ಪಿನ, ಶಂಕರ ಕುಕನೂರ, ಕಾಶಿನಾಥ ಶಿರಬಡಗಿ, ಡಿ.ಎಸ್. ಬಾಪುರೆ ಮುಂತಾದವರು ಹಾಜರಿದ್ದರು. ಚೇತನ್ ಸೊಲಗಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಶಿವಕುಮಾರ ಕುಷ್ಟಗಿ ಸ್ವಾಗತಿಸಿದರು. ಹನಮರಡ್ಡಿ ಇಟಗಿ ನಿರೂಪಿಸಿದರು. ವಿಶ್ವಾಸ ಸೊಲಗಿ ವಂದಿಸಿದರು.ಈ ಸಮಾರಂಭವು ಕೇವಲ ಒಂದು ಪ್ರಶಸ್ತಿ ವಿತರಣಾ ಸಮಾರಂಭವಾಗಿರದೆ, ಶಿಕ್ಷಣ ಕ್ಷೇತ್ರಕ್ಕೆ ಒಂದು ಹೊಸ ದಿಕ್ಕು ತೋರಿಸುವ ವೇದಿಕೆಯಾಗಿ ಹೊರಹೊಮ್ಮಿತು ಎಂದು ಕಲಾ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಹೇಳಿದರು.
ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಇದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂಗ್ಲಿಷ್ ಶಾಲೆಯಲ್ಲಿ ಕಲಿತ ಮಕ್ಕಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.