ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿದ ಪ್ರಕರಣ : ಸಹಾಯಕಿ ಅಮಾನತು

| Published : Aug 05 2025, 11:45 PM IST

ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿದ ಪ್ರಕರಣ : ಸಹಾಯಕಿ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿ, ಜಮೀನು ಕೆಲಸಕ್ಕೆ ಹೋಗಿದ್ದ ಅಂಗನವಾಡಿ ಸಹಾಯಕಿ ನಿರ್ಲಕ್ಷ್ಯತನಕ್ಕೆ ಸರ್ಕಾರ ಅಮಾನತು ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಅಂಗನವಾಡಿಯಲ್ಲಿ ಮಕ್ಕಳ ಕೂಡಿ ಹಾಕಿ, ಜಮೀನು ಕೆಲಸಕ್ಕೆ ಹೋಗಿದ್ದ ಅಂಗನವಾಡಿ ಸಹಾಯಕಿ ನಿರ್ಲಕ್ಷ್ಯತನಕ್ಕೆ ಸರ್ಕಾರ ಅಮಾನತು ಆದೇಶ ಹೊರಡಿಸಿದೆ.

ಜಿಲ್ಲೆಯ ಗುರುಮಠಕಲ್‌ ಪಟ್ಟಣದ ಬೂದೂರು ಗ್ರಾಮದ 1ನೇ ಅಂಗನವಾಡಿ ಕೇಂದ್ರದ ಸಹಾಯಕಿ ಸಾವಿತ್ರಮ್ಮ, ಅಂಗನವಾಡಿಯಲ್ಲಿ ಮಕ್ಕಳು ಒಳಗಿದ್ದ ವೇಳೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ತೆರಳಿದ್ದರು. ಮಕ್ಕಳ ಚೀರಾಟ ಕಂಡು ಗ್ರಾಮಸ್ಥರು ಆಗಮಿಸಿ, ಮುಖ್ಯ ಸಹಾಯಕಿಯ ಕರೆಯಿಸಿ ಬೀಗ ತೆರೆಯಿಸಿ, ಮಕ್ಕಳನ್ನು ಮನೆಗೆ ಕರೆದೊಯ್ದಿದ್ದರು.

ಈ ವಿಚಾರ ವ್ಯಾಪಕ ಟೀಕೆಗೊಳಗಾಗಿತ್ತು. ಆ.3 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ ಉಲ್ಲೇಖಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು, ಕೈಗೊಂಡ ಕ್ರಮದ ಬಗ್ಗೆ ವರದಿ ತುರ್ತು ನೀಡುವಂತೆ ಪತ್ರ ಬರೆದಿದ್ದರು.

ಕರ್ತವ್ಯಲೋಪದಡಿ ಗೌರವಧನ ಸೇವೆಯ ಮಾನ್ಯತಾ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು ಮುಖ್ಯಮಂತ್ರಿಯರ ವಿಶೇಷ ಕರ್ತವ್ಯಾಧಿಕಾರಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯು ವಲಯ ಸಭೆಗೆ ಹೋಗಿರುವಾಗ ಅಂಗನವಾಡಿ ಸಹಾಯಕಿಯು ಮಕ್ಕಳ ಪಾಲನೆ, ಯೋಗಕ್ಷೇಮ ಹಾಗೂ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊಂದಿದವರಾಗಿದ್ದು, ಆದರೆ, ಅಂಗನವಾಡಿ ಕೇಂದ್ರದ ಮಕ್ಕಳನ್ನು ಕೇಂದ್ರದಲ್ಲಿರುವಾಗಲೇ, ಮುಖ್ಯದ್ವಾರದ ಬೀಗವನ್ನು ಹಾಕಿಕೊಂಡು ಕೇಂದ್ರವನ್ನು ಬಿಟ್ಟು ಹೋಗಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ, ಮಕ್ಕಳ ಬಗ್ಗೆ ಬೇಜವಾಬ್ದಾರಿತನ ಮನಗಂಡು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಗೌರವಧನಸೇವೆಯ ಮಾನ್ಯತಾ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.