ಸಾರಾಂಶ
ಮಗು ಶಾಲಾ ವಾಹನದಿಂದ ಬಿದ್ದ ಹಿನ್ನೆಲೆ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಬಿಇಒ ಕಚೇರಿಗೆ ಭೇಟಿ ನೀಡಿ ಖಾಸಗಿ ಶಾಲೆಗಳಲ್ಲಿರುವ ವಾಹನ ಚಾಲಕರ ನಿರ್ವಹಣೆ ಹಾಗೂ ವಾಹನದಲ್ಲಿ ಆಯಾಗಳಿಲ್ಲದಿರುವುದೇ ಮಗು ಬೀಳಲು ಕಾರಣವಾಗಿದೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಖಾಸಗಿ ಶಾಲೆ ವಾಹನ ಹತ್ತಿದ್ದ 1ನೇ ತರಗತಿ ಮಗು ಚಲಿಸುವಾಗ ಕೆಳಗೆ ಬಿದ್ದು ಗಾಯಗಳಾಗಿ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಂಜುಂಡಪ್ಪ ಹಾಗೂ ಪರಸಮ್ಮರ 6 ವರ್ಷದ ಪುತ್ರ ಮನ್ವಿತ್ ಪಟ್ಟಣದ ನ್ಯೂ ಆಕ್ಸ್‌ಬರ್ಡ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಬೆಳಗ್ಗೆ ಮಗು ಶಾಲೆಗೆ ತೆರಳಲು ತಮ್ಮ ಮನೆ ಬಳಿ ಬಂದ ವಾಹನವನ್ನು ಹತ್ತಿ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಜಾರಿ ಬಿದ್ದಿದೆ. ಮಗು ಹಿಡಿದುಕೊಳ್ಳಲು ಶಾಲಾ ವಾಹನದಲ್ಲಿ ಆಯಾ ಇಲ್ಲದಿರುವುದು ಹಾಗೂ ಚಾಲಕನ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿದ್ದ ಮಗುವಿಗೆ ಮುಖ ತರಚಿ ಗಾಯವಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಶಿಕ್ಷಣ ಸಂಯೋಜಕಿ ಡಾ, ಪ್ರತಿಮಾ ಮೈಸೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ.ಬಿಇಒ ಗೆ ದೂರು: ಮಗು ಶಾಲಾ ವಾಹನದಿಂದ ಬಿದ್ದ ಹಿನ್ನೆಲೆ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಬಿಇಒ ಕಚೇರಿಗೆ ಭೇಟಿ ನೀಡಿ ಖಾಸಗಿ ಶಾಲೆಗಳಲ್ಲಿರುವ ವಾಹನ ಚಾಲಕರ ನಿರ್ವಹಣೆ ಹಾಗೂ ವಾಹನದಲ್ಲಿ ಆಯಾಗಳಿಲ್ಲದಿರುವುದೇ ಮಗು ಬೀಳಲು ಕಾರಣವಾಗಿದೆ ಎಂದು ದೂರಿದರು.
ಈ ಕುರಿತು ಸ್ಥಳೀಯ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚೆ ನಡೆಸಬೇಕು. ಒಂದು ವೇಳೆ ಮಗುವಿಗೆ ಅಪಾಯವಾಗಿದ್ದರೆ ಪೋಷಕರಿಗೆ ಯಾರು ಜವಾಬ್ದಾರಿ, ಮುಂದಿನ ದಿನಗಳದಲ್ಲಿ ಇಂತಹ ಘಟನೆಗಳ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಪ್ರಭಾರ ಬಿಇಒ ನಂದೀಶ್ ಅವರಿಗೆ ಒತ್ತಾಯ ಮಾಡಿದರು. ವೇದಿಕೆ ಕಾರ್ಯದರ್ಶಿ ಜಗದೀಶ್ ಪಾಪಣ್ಣಿ ಇತರರಿದ್ದರು.