ಬಾಲ ಕಾರ್ಮಿಕ ನಿರ್ಮೂಲನಾ ಕಾರ್ಯಕ್ರಮ ಕಾಟಾಚಾರವಾಗಬಾರದು

| Published : Oct 19 2023, 12:45 AM IST

ಬಾಲ ಕಾರ್ಮಿಕ ನಿರ್ಮೂಲನಾ ಕಾರ್ಯಕ್ರಮ ಕಾಟಾಚಾರವಾಗಬಾರದು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ನಿಯೋಜಿತ ಅಧಿಕಾರಿಗಳು ನಿಯಮಿತವಾಗಿ ಬಾಲ ಕಾರ್ಮಿಕ ಪತ್ತೆಗಾಗಿ ದಿಡೀರ್ ದಾಳಿ ಮಾಡಬೇಕು. ಬಾಲ ಕಾರ್ಮಿಕ ನಿರ್ಮೂಲನಾ ಕಾರ್ಯಕ್ರಮ ಕಾಟಾಚಾರವಾಗಬಾರದು. ಪತ್ತೆಯಾದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ನಿಯೋಜಿತ ಅಧಿಕಾರಿಗಳು ನಿಯಮಿತವಾಗಿ ಬಾಲ ಕಾರ್ಮಿಕ ಪತ್ತೆಗಾಗಿ ದಿಡೀರ್ ದಾಳಿ ಮಾಡಬೇಕು. ಬಾಲ ಕಾರ್ಮಿಕ ನಿರ್ಮೂಲನಾ ಕಾರ್ಯಕ್ರಮ ಕಾಟಾಚಾರವಾಗಬಾರದು. ಪತ್ತೆಯಾದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ಬುಧವಾರ ಬಾಲ ಕಾರ್ಮಿಕ ನಿರ್ಮೂಲನೆ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಜಿಲ್ಲಾ ಕಾರ್ಯಪಡೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಬಾಲ್ಯಾವಸ್ಥೆ ಹಾಗೂ ಕೀಶೋರಾವಸ್ಥೆ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಪೊಲೀಸ್, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಮಕ್ಕಳ ಕಲ್ಯಾಣ, ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ೧೧ ಇಲಾಖೆಗಳ ಅಧಿಕಾರಿಗಳನ್ನು ನಿರೀಕ್ಷಕರನ್ನಾಗಿ ಸರ್ಕಾರ ನಿಯೋಜಿಸಿದೆ. ಜಿಲ್ಲಾ ಹಾಗೂ ತಾಲೂಕು ಕಾರ್ಯಪಡೆಯಲ್ಲಿರುವ ಸದಸ್ಯರು ತಂಡವಾಗಿ ಗ್ಯಾರೇಜ್, ಹೋಟೆಲ್ ಸೇರಿದಂತೆ ವಿವಿಧೆಡೆ ಬಾಲ ಕಾರ್ಮಿಕ ದಿಢೀರ್ ದಾಳಿ ಮಾಡುವ ಮೂಲಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಕುರಿತಂತೆ ತಪಾಸಣೆ ನಡೆಸಬೇಕು. ಮಕ್ಕಳನ್ನು ದುಡಿಮೆಗೆ ತೊಡಗಿಸಿಕೊಂಡ ಉದ್ಯೋಗದಾತರ ಮೇಲೆ ಮೊಕದ್ದಮೆ ದಾಖಲಿಸಬೇಕು. ಪತ್ತೆಯಾದ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ರಕ್ಷಣೆ ಹಾಗೂ ಪೋಷಣೆಗಾಗಿ ನಿಯಮಾನುಸಾರ ಕ್ರಮವಹಿಸಬೇಕು. ಮಗುವಿನ ಮನೆಗೆ ತೆರಳಿ ಪಾಲಕರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಅವಲೋಕಿಸಿ, ಮಕ್ಕಳಿಗೆ ಶಿಕ್ಷಣ, ಕೌಶಲ್ಯ ತರಬೇತಿ ಇನ್ನಿತರ ಕಾರ್ಯಕ್ರಮಗಳ ಮೂಲಕ ಮುಖ್ಯ ವಾಹಿನಿಗೆ ತರುವ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದರು.

ಹೋಬಳಿ ಮಟ್ಟದಲ್ಲಿ ಕಾರ್ಯಪಡೆ:

ಸರ್ಕಾರದ ಹೊಸ ಆದೇಶದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನಾ ಕಾರ್ಯಪಡೆ ಜೊತೆಗೆ ಹೋಬಳಿ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ನಿರ್ದೇಶನ ನೀಡಲಾಗಿದೆ. ಹೋಬಳಿ ಮಟ್ಟದಲ್ಲಿ ತಂಡ ರಚಿಸಿ ಪ್ರತಿ ತಂಡದಿಂದ ತಿಂಗಳಿಗೆ ಹದಿನೈದು ತಪಾಸಣೆ ನಡೆಸಬೇಕು. ಪ್ರತಿ ತಪಾಸಣೆ ಜಿಯೋ ಟ್ಯಾಗ್ ಮಾಡಬೇಕು. ದಾಳಿಯ ನಂತರ ತೆಗೆದುಕೊಂಡ ಕ್ರಮಗಳ ಕುರಿತಂತೆ ಹದಿನೈದು ದಿನಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಬಾಲ ಕಾರ್ಮಿಕರ ರಕ್ಷಣಾ ಕಾರ್ಯವನ್ನು ಕಾಳಜಿಯಿಂದ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕೇಸ್‌ಗಳನ್ನು ದಾಖಲಿಸಬೇಕು. ರಕ್ಷಣೆಗೊಂಡ ಪ್ರತಿ ಮಗುವಿನ ಟ್ರ್ಯಾಕಿಂಗ್ ಮಾಡಬೇಕು. ಬಾಲ ಕಾರ್ಮಿಕ ಪತ್ತೆ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು. ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ಕೈಗೊಳ್ಳಬೇಕು. ದಿಡೀರ್ ದಾಳಿಯಲ್ಲಿ ಸತತ ಗೈರು ಹಾಜರಾಗುವ ಅಧಿಕಾರಿಗಳ ವಿವರ ನೀಡಿದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

ನ.೧೪ರಿಂದ ಬಾಲ ಕಾರ್ಮಿಕ ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ಆಯೋಜಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ಜಿಲ್ಲೆಯ ೨೨೩ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕ ನಿರ್ಮೂಲನೆ ಕುರಿತಂತೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

ಡ್ರಾಪ್‌ಔಟ್ ಮಾಹಿತಿ ಸಲ್ಲಿಸಿ-

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ೫೦೫ ಮಕ್ಕಳ ಪೈಕಿ ೪೨೧ ಮಕ್ಕಳ ಪತ್ತೆಮಾಡಿ ಶಾಲೆಗೆ ಸೇರಿಸಿರುವ ಮಾಹಿತಿ ನೀಡಿದ್ದೀರಿ. ಉಳಿದ ೮೪ ಮಕ್ಕಳು ಎಲ್ಲಿದ್ದಾರೆ?, ವಲಸೆ ಹೋಗಿದ್ದಾರೇ ಎಂಬ ಪ್ರತಿ ಮಗುವಿನ ಮಾಹಿತಿಯನ್ನು ಒಂದು ವಾರದಲ್ಲಿ ಸಲ್ಲಿಸಬೇಕು. ಸ್ಥಳೀಯವಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಹಾಗೂ ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳಿಂದ ದೃಢೀಕರಣ ಪಡೆದು ಮಾಹಿತಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಪ್ರಕರಣ ದಾಖಲಿಸಿ:

ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ, ಬಾಲ ಕಾರ್ಮಿಕ ನಿರ್ಮೂಲನೆಗೆ ಕಾರ್ಯಾಗಾರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿ ೨.೭೪ ಲಕ್ಷ ಮಕ್ಕಳಿದ್ದಾರೆ. ಈ ಪೈಕಿ ೪೨೧ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಇದೆ. ಈ ಮಕ್ಕಳನ್ನು ಮುಖ್ಯ ವಾಹಿನಿಗೆ ತರಬೇಕು. ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳ ಪತ್ತೆಗಾಗಿ ನಿಯಮಿತವಾಗಿ ಅಧಿಕಾರಿಗಳು ತಂಡವಾಗಿ ಕಾರ್ಯಾಚರಣೆ ಮಾಡಬೇಕು. ಬಾಲ ಕಾರ್ಮಿಕರು ಪತ್ತೆಯಾದರೆ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರ ವಿರುದ್ಧ ಕಡ್ಡಾಯವಾಗಿ ದೂರು ದಾಖಲಿಸಿ ಎಂದು ಸಲಹೆ ನೀಡಿದರು.

ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ, ಬಾಲ ಕಾರ್ಮಿಕರ ನಿರ್ಮೂಲನೆಗೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಚಟುವಟಿಕೆ ಕುರಿತು ಸಭೆಗೆ ವಿವರಿಸಿದರು. ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಇತರರು ಇದ್ದರು.