ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿ ಸಾವು ಹಾಗೂ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣ ಸಂಬಂಧ ತಾಲೂಕಿನ ಟಿ.ಕಾಗೇಪುರ ಗೋಕುಲ ವಿದ್ಯಾಸಂಸ್ಥೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಮೇಘಾಲಯ ಆಡಳಿತ ಇಲಾಖೆಯ ಆಯುಕ್ತ ಸಿರಿಲ್, ಕಾರ್ಯದರ್ಶಿ ಕ್ರಯಿಲ್ ವಿ ಡಿಂಗ್ ದೋ ಭೇಟಿ ನೀಡಿ, ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ಶಾಲೆಯ ಕಾರ್ಯದರ್ಶಿ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.ಮೇಘಾಲಯದಿಂದ ಗೋಕುಲ ವಿದ್ಯಾಸಂಸ್ಥೆಗೆ ವಿದ್ಯಾರ್ಥಿಗಳನ್ನು ಕರೆತಂದವರು ಯಾರು, ಶಾಲೆಯ ಹಾಜರಾತಿ ಎಷ್ಟು, ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಏಕೆ, ಪ್ರಕರಣ ಯಾವ ರೀತಿ ನಡೆಯಿತು ಎಂದು ಗೋಕುಲ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಲಂಕೇಶ್ ಅವರನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಪ್ರಶ್ನೆ ಮಾಡಿದರು.
ವೈನಾಡ್ ಎಂಬ ವ್ಯಕ್ತಿಯು ಮೇಘಾಲಯದಿಂದ ಬಡ ವಿದ್ಯಾರ್ಥಿಗಳನ್ನು ಇಲ್ಲಿಗೆ ಕಳುಹಿಸಿ ವಿದ್ಯಾಬ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಡಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಾಲೆಯಲ್ಲಿಯೇ ವಸತಿಯನ್ನು ಕಲ್ಪಿಸಲಾಗಿತ್ತು, ಆರೋಗ್ಯ ಏರುಪೇರು ಕಂಡು ಬಂದಾಗ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು ಎಂದರು.ಸ್ಥಳೀಯ ವೈದ್ಯಾಧಿಕಾರಿ ಡಾ.ಸಚಿನ್ ಡಿ.ಗೌಡ ಅವರಿಂದ ಅಸ್ವಸ್ಥಗೊಂಡಿದ್ದ ಮಕ್ಕಳಿಗೆ ಯಾವ ಯಾವ ಚಿಕಿತ್ಸೆ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಹಿಸಿದ ಡಾ.ಸಚಿನ್ ಮಾತನಾಡಿ, ಮಕ್ಕಳ ಅನಾರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಶಾಲೆಗೆ ಆಗಮಿಸಿ ಎಲ್ಲಾ ಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ, ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡುವುದಕ್ಕೆ ತಿಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಪ್ರಕರಣ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೂರಿನಲ್ಲಿ ಸೆಕ್ಷನ್‌ಗಳನ್ನು ಬದಲಾವಣೆ ಮಾಡಬೇಕೆಂದು ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್ ಅವರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ ನೀಡಿದರು.ಶಾಲೆಯ ಎಲ್ಲ ಕೊಠಡಿಗಳನ್ನು ಹೊರಗಡೆಯಿಂದ ಪರಿಶೀಲಿಸಿ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಅವರಿಂದ ಮಕ್ಕಳ ದಾಖಲಾತಿ ಹಾಗೂ ಮೇಘಾಲಯದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು, ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದರೆ ಪೋಷಕರ ಅನುಮತಿ ಬೇಕು. ಮಕ್ಕಳನ್ನು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಿ ಆದೇಶ ಪಡೆಯಬೇಕು, ಜೆ.ಜೆ.ಆಕ್ಟ್ ಪ್ರಕಾರ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜುಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ಧೇಶಕ ಎಚ್.ಆರ್ ಶಿವರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಜಿ ಮಹೇಶ್, ವೈದ್ಯಾಧಿಕಾರಿ ಸಚಿನ್ ಇತರರಿದ್ದರು.