ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜನ್ಮತಃ ಕರೋನರಿ ಕ್ಯಾಮೆರಾಲ ಫಿಸ್ತುಲಾ ಎಂಬ ಹೃದ್ರೋಗದಿಂದ ಬಳಲುತ್ತಿದ್ದ 20 ತಿಂಗಳ ಮಗುವೊಂದು ಶೀತ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಅತ್ಯಂತ ಕಠಿಣ ಮತ್ತು ಸಂಕೀರ್ಣ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿನ ಜೀವ ಉಳಿಸುವಲ್ಲಿ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ಹೃದ್ರೋಗ ತಜ್ಞರು ಯಶಸ್ವಿಯಾಗಿದ್ದಾರೆ.ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಮೂಲದ 20 ತಿಂಗಳ ಬಾಲಕ ಸುಮಾರು 2 ಸಾವಿರ ಮಕ್ಕಳಲ್ಲಿ ಓರ್ವ ಬಾಲಕರಲ್ಲಿ ಕಂಡು ಬರುವ ಕರೋನರಿ ಕ್ಯಾಮೆರಾಲ ಫಿಸ್ತುಲಾ ಎಂಬ ರೋಗದಿಂದ ಬಳಲುತ್ತಿತ್ತು. ಹೀಗಾಗಿ ಮೇಲಿಂದ ಮೇಲೆ ಶೀತ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ಶಾರೀರಿಕ ಬೆಳವಣಿಗೆಯಲ್ಲಿ ಕುಂಠಿತಗೊಂಡಿರುವ 20 ತಿಂಗಳ ಮಗುವೊಂದನ್ನು ಚಿಕಿತ್ಸೆಗಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ತರಲಾಗಿತ್ತು. ಇಕೋಕಾರ್ಡಿಯೊಗ್ರಾಫಿ ತಪಾಸಣೆಗೊಳಡಿಸಿದಾಗ ಈ ರೋಗ ಕಂಡು ಬಂತು. ಹೀಗಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.ಆಸ್ಪತ್ರೆಯ ಹಿರಿಯ ಮಕ್ಕಳ ಹೃದ್ರೋಗ ತಜ್ಞವೈದ್ಯರಾದ ಡಾ.ವೀರೇಶ್ ಮಾನ್ವಿ ಅವರು ಈ ಕಾಯಿಲೆ ಪತ್ತೆ ಮಾಡಿದರು. ಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ.ಗಣಂಜಯ್ ಸಾಳ್ವೆ ಅವರು ಸಂಕೀರ್ಣ ಶಸ್ತ್ರಚಿಕಿತ್ಸೆ ನೇರವೇರಿಸಿದರು. ಅರವಳಿಕೆ ತಜ್ಞವೈದ್ಯರಾದ ಡಾ. ಆನಂದ ವಾಘರಾಳಿ, ಆನಂದ ಘೊರ್ಪಡೆ, ಅಭಯ ಸಂಸುದ್ದಿ, ಸಾವಿತ್ರಿ ಪಾಟೀಲ ಅವರು ಸಹಕರಿಸಿದರು. ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಚಿಕ್ಕಮಕ್ಕಳ ಹೃದ್ರೋಗ ಇಂಟೆನ್ಸಿವಿಸ್ಟ ಡಾ. ನಿಧಿ ಮಾನ್ವಿ ಅವರು ನೆರವೇರಿಸಿದರು. ರೋಟರಿ ಕ್ಲಬ್ ಆಫ್ ಬೆಳಗಾವಿ (ದಕ್ಷಿಣ)ಯ ಸದಸ್ಯರು ಹಾಗೂ ಅಮೇರಿಕೆಯ ರೋಟರಿ ಕ್ಲಬ್ ಆಫ್ ಗೋಲ್ಡ ಕೋಸ್ಟ ಲೇಕ್ ಅವರ ಧನ ಸಹಾದಿಂದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.