ಸಾರಾಂಶ
ಮುಂಡರಗಿ: ಕೃಷಿ ಹಿನ್ನೆಲೆಯ ಕುಟುಂಬದವನಾದ ನಾನು ಬಾಲ್ಯದಲ್ಲೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೆ, ಮ್ಯಾರಾಥಾನ್ ಓಟದಲ್ಲಿ ನಾನು ಗಳಿಸುತ್ತಿರುವ ಸತತ ಯಶಸ್ಸಿಗೆ ಬಾಲ್ಯದ ದೈಹಿಕ ಪರಿಶ್ರಮವೇ ಕಾರಣವಾಗಿದೆ ಎಂದು ಇತ್ತೀಚೆಗೆ ಅಖಿಲ ಭಾರತ ವೈದ್ಯರ ಮ್ಯಾರಾಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಡಾ. ಜಿ.ಬಿ. ಬೀಡಿನಹಾಳ ಹೇಳಿದರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸಿರಿಗೆರೆಯ ಗುರು ಮುದುಕೇಶ್ವರ ಪ್ರೌಢಶಾಲೆ, ಕಲಕೇರಿ ಹಾಗೂ ಎಂ.ಬಿ. ಪಾಟೀಲ್ ಪ ಪೂ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಲಿಂ. ಅನ್ನಪೂರ್ಣಮ್ಮ ಎ. ಹಿರೇಮಠರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ, ಸನ್ಮಾನ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮ ಕ್ಷೀಣಿಸುತ್ತಿದ್ದು, ನಾವು ಒಕ್ಕಲುತನದಲ್ಲಿ ಮೈ-ಕೈ ಗಟ್ಟಿಮುಟ್ಟಾಗಿಸಿಕೊಂಡ ಫಲವಾಗಿ ಆರೋಗ್ಯಯುತ ಜೀವನ ಸಾಧ್ಯವಾಗಿದೆ. ಇತ್ತೀಚೆಗೆ ಜರುಗಿದ ಅಖಿಲ ಭಾರತ ವೈದ್ಯರುಗಳ ಆಟೋಟ ಸ್ಪರ್ಧೆಗಳಲ್ಲಿ ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ೧೦ ಕಿ.ಮೀಗಳ ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ, ಹತ್ತು ಕಿಲೋಮೀಟರ್‌ಗಳ ವಾಕಥಾನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಅದೇ ರೀತಿ ನಾಲ್ಕು ನೂರು ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ದೈನಂದಿನ ಶಿಸ್ತು ಹಾಗೂ ಶ್ರಮ ಕಾರಣ ಎಂದರು.
ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಪ್ರಾರಂಭದಲ್ಲಿ ತಂದೆ ತಾಯಿಗಳು ಕಾರಣರಾದರೆ ಮುಂದೆ ಅವರ ಹೊಟ್ಟೆ ಮತ್ತು ನೆತ್ತಿಯನ್ನು ಕಾಯುವ ಮತ್ತು ಅವರ ಮನೆ ಮನಗಳನ್ನು ಬೆಳಗುವ ಮಕ್ಕಳನ್ನು ಪಾಲಿಸುವ ಪತ್ನಿ ಕಾರಣಳು. ತಮ್ಮ ಕಣ್ಣ ಮುಂದೆ ಬೆಳೆದ ಗುರುಲಿಂಗಪ್ಪ ಪ್ರಸಿದ್ಧ ವೈದ್ಯನಾಗಿ ಜನ ಸೇವಕನಾಗಿ ಕಾರ್ಯನಿರ್ವಹಿಸಿದ ಬಗೆಯನ್ನು ಸವಿಸ್ತಾರವಾಗಿ ಹೇಳಿದ ಅವರು ಡಾ. ಬೀಡನಾಳ್ ಮತ್ತು ಅವರ ಪತ್ನಿಯನ್ನು ಅನುರೂಪ ದಂಪತಿಗಳು ಎಂದು ಮೆಚ್ಚಿ ಹಾರೈಸಿದರು.ಪ್ರಾಧ್ಯಾಪಕಿ ಮೀನಾಕ್ಷಿ ರಾಜೂರ ಉಪನ್ಯಾಸ ನೀಡಿದರು. ಶಿಕ್ಷಕ ಎಚ್.ಎಸ್. ಮಹೇಶ್ ಸ್ವಾಮಿ ವಿವೇಕಾನಂದರ ಜೀವನ ಕುರಿತು ಮಾತನಾಡಿದರು. ಕವಿಗಳಾದ ಕಳಕಪ್ಪ ಜಲ್ಲಿಗೇರಿ, ಕೊಟ್ರೇಶ್ ಜವಳಿ ಅವರು ತಮ್ಮ ಸ್ವರಚಿತ ಕವನ ವಾಚನ ವಾಚಿಸಿದರು.
ಶಾಲೆಯ ನಿವೃತ್ತ ಶಿಕ್ಷಕ ಪಿ.ಎಂ.ಪಾಟೀಲ, ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಪ್ರಾ. ಸುವರ್ಣ ಸುತಾರ್, ಸಾಹಿತ್ಯ ಪರಿಷತ್ತಿನ ಸದಸ್ಯ ಕೃಷ್ಣ ಪರಾಪುರ್, ಮಧುಮತಿ ಇಳಕಲ್, ಬಸವಂತಪ್ಪ ದೇಸಾಯಿ, ಹುಳಕಣ್ಣವರ ಇದ್ದರು.ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್. ರಾಥೋಡ್ ಸ್ವಾಗತಿಸಿದರು.