ದೇವೇಗೌಡರು ಕೋಮುವಾದಿಗಳ ಜೊತೆ ಸೇರಲು ಮಕ್ಕಳೇ ಕಾರಣ

| Published : Mar 26 2024, 01:18 AM IST

ಸಾರಾಂಶ

ಜಾತ್ಯಾತೀತ ಸಿದ್ಧಾಂತದ ದೇವೇಗೌಡರು ಈಗ ಕೋಮುವಾದಿಗಳ ಜೊತೆ ಸೇರುವಂತಹ ಪರಿಸ್ಥಿತಿಗೆ ಬರಲು ಅವರ ಮಕ್ಕಳೇ ಕಾರಣ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಕೆ.ಎನ್.ಶಿವಲಿಂಗೇಗೌಡ ಹೇಳಿದರು.

ಕೋಮುವಾದಿಗಳ ಬೆಂಬಲ ಪಡೆಯದೆ ಪ್ರಧಾನಿ ಪಟ್ಟ ಬಿಟ್ಟಿದ್ದರು: ಶಿವಲಿಂಗೇಗೌಡ

ಕನ್ನಡಪ್ರಭ ವಾರ್ತೆ, ಕಡೂರು

ಜಾತ್ಯಾತೀತ ಸಿದ್ಧಾಂತದ ದೇವೇಗೌಡರು ಈಗ ಕೋಮುವಾದಿಗಳ ಜೊತೆ ಸೇರುವಂತಹ ಪರಿಸ್ಥಿತಿಗೆ ಬರಲು ಅವರ ಮಕ್ಕಳೇ ಕಾರಣ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಕೆ.ಎನ್.ಶಿವಲಿಂಗೇಗೌಡ ಹೇಳಿದರು.ಕಡೂರಿನ ಸುರುಚಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕೋಮುವಾದಿಗಳ ಬೆಂಬಲ ಪಡೆಯುವುದಿಲ್ಲ ಎಂದು ಪ್ರಧಾನಿ ಪಟ್ಟ ಬಿಟ್ಟಿದ್ದ ದೇವೇಗೌಡರನ್ನು ಕೇವಲ ಮೂರು ಸ್ಥಾನಕ್ಕಾಗಿ ಅದೇ ಕೋಮುವಾದಿ ಪಕ್ಷದ ಜೊತೆ ಹೋಗುವಂತೆ ಮಾಡಿ ಪಕ್ಷವನ್ನು ದೈನೇಸಿ ಸ್ಥಿತಿಗೆ ತಂದವರು ಯಾರೆಂದು ಜನತೆಗೆ ತಿಳಿದಿದೆ. ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರ ಮೀನಾ ಮೇಷ ಎಣಿಸಿತು. ರಾಜ್ಯಕ್ಕೆ ನ್ಯಾಯವಾಗಿ ಕೊಡಬೇಕಾದ ಹಣ ಕೊಡಿಸ ಬೇಕೆಂದು ರಾಜ್ಯಸರ್ಕಾರ ಸುಪ್ರೀಂ ಕೋರ್ಟಿಗೆ ಹೋಗಿದೆ. ಒಕ್ಕೂಟ ವ್ಯವಸ್ಥೆ ಯಲ್ಲಿ ಯಾವುದೇ ರಾಜ್ಯ ತೊಂದರೆ ಗೊಳಗಾದರೆ ಕೇಂದ್ರ ಸಹಾಯಕ್ಕೆ ಧಾವಿಸಬೇಕು ಎಂದು ಸಂವಿಧಾನದಲ್ಲೆ ಉಲ್ಲೇಖವಾಗಿದೆ. ಇಷ್ಟು ಭಂಡ ಸರಕಾರವನ್ನು ನಾವು ನೋಡಿಲ್ಲ ಎಂದರು.

ಬಿಜೆಪಿ ಪಕ್ಷದ ದುರಾಡಳಿತ ಮತ್ತು ಸ್ವಾಭಿಮಾನದ ನಡುವಿನ ಚುನಾವಣೆ ಇದಾಗಿದೆ. ಪುಟ್ಟಸ್ವಾಮಿ ಗೌಡರು ಮತ್ತು ದೇವೇ ಗೌಡರ ಕುಟುಂಬದ ನಡುವಿನ ಹೋರಾಟದ ಚುನಾವಣೆಯೂ ಹೌದು.ಇದರಲ್ಲಿ ಶ್ರೇಯಸ್ ಪಟೇಲ್ ಗೆದ್ದು ಸಂಸದರಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪ್ರಜ್ವಲ್ ಪರವಾಗಿ ದುಡಿದಿದ್ದೆವು. ಈಗ ಅವರು ಬಿಜೆಪಿ ಜೊತೆ ಯಿದ್ದಾರೆ. ಕೊರೊನಾ ಸಮಯದಲ್ಲೂ ಬಂದು ಜನರಲ್ಲಿ ಆತ್ಮಸ್ಥೈರ‍್ಯ ತುಂಬಲಿಲ್ಲ. ನಮಗೆ ಖಾಲಿ ಸಂಸದರು ಬೇಕಿಲ್ಲ. ಬಿಜೆಪಿ ಮತದಾರರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಾಗೆಂದು ಏಕಪಕ್ಷೀಯವಾಗಿ ಪ್ರಜ್ವಲ್ ಅನ್ನು ಜನ ಬೆಂಬಲಿಸಲು ಸಾಧ್ಯವಿಲ್ಲ. ಚಿಕ್ಕಮಗಳೂರು ಕ್ಷೇತ್ರದಲ್ಲಿದ್ದಾಗ ಪಕ್ಷಾತೀತ, ಜಾತ್ಯಾತೀತವಾಗಿ ಡಿ.ಸಿ.ಶ್ರೀಕಂಠಪ್ಪ ನವರನ್ನು ಜನ ಬೆಂಬಲಿಸಿದ ರೀತಿಯಲ್ಲೆ ಹಾಸನ ಲೋಕಸಭಾ ಕ್ಷೇತ್ರದ ಜನತೆ ಶ್ರೇಯಸ್ ಪಟೇಲ್ ರನ್ನು ಬೆಂಬಲಿಸುತ್ತಾರೆ. ಕಡೂರು ಕ್ಷೇತ್ರದಲ್ಲಿ ನನ್ನನ್ನು ಬೆಂಬಲಿಸಿದ ರೀತಿಯಲ್ಲೇ ಕಾಂಗ್ರೆಸ್ ನ ಶ್ರೇಯಸ್ ರವರನ್ನು ಬೆಂಬಲಿಸುವುದು ನಿಶ್ಚಿತ. ಕೆಲಸ ಮಾಡುವವರ ಮತ್ತು ಮಾಡದವರ ನಡುವೆ ಈ ಚುನಾವಣೆ ಎಂದರು.ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ ಕ್ಷೇತ್ರದಲ್ಲಿರುವ ಕಡೂರು ಸಂಸದರ ಅವಗಣನೆಗೆ ತುತ್ತಾಗಿದೆ ಎಂಬ ಮಾತನ್ನು ಪ್ರಜ್ವಲ್ ನಿಜ ಮಾಡಿದ್ದಾರೆ. ನಾಲ್ಕೈದು ಬಾರಿ ಬಿಟ್ಟರೆ ಮತ್ತೆ ಕಡೂರಿನ ಕಡೆ ಬರಲಿಲ್ಲ. ಆದರೆ ಇನ್ನು ಮುಂದೆ ಈ ಬೇಸರ ಹೋಗಲಾಡಿಸುತ್ತೇನೆ. ಒಟ್ಟಾರೆ ಹಾಸನ ಲೋಕಸಭಾ ಕ್ಷೇತ್ರದ ಸಂಸದನಾಗಿ ಕ್ಷೇತ್ರದ ಚಿತ್ರಣ ಬದಲಿಸುವ ಅವಕಾಶ ಕೊಡಿ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್ ಮತ್ತು ಬಾಸೂರು ಚಂದ್ರಮೌಳಿ, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್ , ಈರಳ್ಳಿ ರಮೇಶ್ ಇದ್ದರು.

25ಕೆಕೆಡಿಯು3.

ಕಡೂರಿನ ಸುರುಚಿ ಸಭಾಂಗಣದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇ ಗೌಡ ಸುದ್ದಿಗೋಷ್ಟಿ ನಡೆಸಿದರು.