ಕಡೂರು ಐದು ವರ್ಷಗಳಿಂದ ನಮ್ಮ ಶಾಲೆಗೆ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದೇವೆ. ಪ್ರತಿ ವರ್ಷದ ಮಕ್ಕಳ ಗ್ರಾಮ ಸಭೆಯಲ್ಲಿ ಮನವಿ ಮಾಡಿದರೂ ಯಾವ ಪ್ರಯೋಜನವಾಗುತ್ತಿಲ್ಲ. ಭರವಸೆ ಬೇಡ. ಕಟ್ಟಡ ನಿರ್ಮಾಣ ಯಾವಾಗ ಆಗುತ್ತದೆ ನಿಜ ಹೇಳಿ ಎಂದು ವಿದ್ಯಾರ್ಥಿಗಳು, ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.

ಪಂಚನಹಳ್ಳಿಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆ

ಕನ್ನಡಪ್ರಭ ವಾರ್ತೆ, ಕಡೂರು

ಐದು ವರ್ಷಗಳಿಂದ ನಮ್ಮ ಶಾಲೆಗೆ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದೇವೆ. ಪ್ರತಿ ವರ್ಷದ ಮಕ್ಕಳ ಗ್ರಾಮ ಸಭೆಯಲ್ಲಿ ಮನವಿ ಮಾಡಿದರೂ ಯಾವ ಪ್ರಯೋಜನವಾಗುತ್ತಿಲ್ಲ. ಭರವಸೆ ಬೇಡ. ಕಟ್ಟಡ ನಿರ್ಮಾಣ ಯಾವಾಗ ಆಗುತ್ತದೆ ನಿಜ ಹೇಳಿ ಎಂದು ವಿದ್ಯಾರ್ಥಿಗಳು, ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.

ಇದು ಕಡೂರು ತಾಲೂಕಿನ ಗಡಿ ಗ್ರಾಮ ಪಂಚನಹಳ್ಳಿಯಲ್ಲಿ ಶನಿವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ 9 ನೇ ತರಗತಿ ವಿದ್ಯಾರ್ಥಿ ಅರುಣ್ ಅಧಿಕಾರಿಗಳ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಮ್ಮಇಂದಿರಾ ಗಾಂಧಿ ವಸತಿ ಶಾಲೆ ಅನೇಕ ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಮೂಲ ಸೌಕರ್ಯ ಒದಗಿಸುವಂತೆ ಪ್ರತಿ ವರ್ಷ ಗ್ರಾಮ ಸಭೆಯಲ್ಲಿ ಮಾಡುವ ಮನವಿಗೆ ಕೇವಲ ಭರವಸೆ ನೀಡಿ ಹೋಗುತ್ತಿದ್ದೀರಿ. ಮುಂದೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾದರೂ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಿ ಎಂದು ಆಗ್ರಹಿಸಿದರು.

ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ಜಾಗ ಗುರುತಿಸಲಾಗಿದೆ. ಅನುದಾನ ಬಿಡುಗಡೆ ಯಾಗಿದೆ. ಆದರೆ ಪಹಣಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ಬದಲಾಗಿ ಮೊರಾರ್ಜಿವಸತಿ ಶಾಲೆ ಎಂದು ತಪ್ಪಾಗಿ ನಮೂದಾಗಿದೆ. ಈ ತಾಂತ್ರಿಕ ಸಮಸ್ಯೆ ಬಗೆಹರಿದು ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಚಾರ್ಯ ಕೆ.ಕೆ.ಬಸವರಾಜ್ ಉತ್ತರಿಸಿದರು. ವಸತಿ ಶಾಲೆ ಕಟ್ಟಡ ಕಾಮಗಾರಿ ಆರಂಭವಾದರೂ ಕೂಡ ಪೂರ್ಣಗೊಳ್ಳಲು 2-3 ವರ್ಷಬೇಕು ಆವರೆಗೆ ವಿದ್ಯಾರ್ಥಿಗಳು ಮೂಲ ಸೌಕರ್ಯವಿಲ್ಲದೆ ಇರಲು ಸಾಧ್ಯವಿಲ್ಲ. ಆದ್ದರಿಂದ ಕಟ್ಟಡದ ಮಾಲೀಕರ ಜೊತೆ ಮಾತನಾಡಿ, ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಪ್ರಾಚಾರ್ಯ ಬಸವರಾಜ್ ಅವರಿಗೆ ತಾಪಂ. ಇಒ ಸಿ.ಆರ್.ಪ್ರವೀಣ್ ಸೂಚನೆ ನೀಡಿದರು. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮೇಘನಾ, ಶಾಲೆಯಲ್ಲಿ ಶೌಚಾಲಯದ ಸಮಸ್ಯೆಯಿದೆ. ಕೊಠಡಿಗಳು ಸೋರುತ್ತಿವೆ. ಪ್ರಯೋಗಾಲಯದ ಕೊಠಡಿ ಕಿರಿದಾಗಿದೆ. ಹೆಣ್ಣುಮಕ್ಕಳಿಗೆ ಕಾಲೇಜಿನಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಿಕೊಡಬೇಕು ಎಂದರು.

ದೊಡ್ಡನಕಟ್ಟೆ ಕಿರಿಯ ಪ್ರಾಥಮಿಕ ಶಾಲೆ ಯಶವಂತ್, ಶಾಲೆಯಲ್ಲಿ ಶೌಚಾಲಯವಿಲ್ಲ.ಆಟವಾಡಲು ಮೈದಾನದ ಕೊರತೆ ನೀಗಿಸಿ ಎಂದರೆ. ವಿದ್ಯಾರ್ಥಿನಿ ಬೃಂದಾ ಪಂಚನಹಳ್ಳಿಯ ಅಂಗಡಿ ಮತ್ತು ಹೋಟೆಲ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ನ್ನು ಯಥೇಚ್ಚವಾಗಿ ಬಳಸುತ್ತಿದ್ದಾರೆ. ಯೂಸ್ ಅಂಡ್ ಥ್ರೋ ಲೋಟಗಳನ್ನು ಬಳಸಿ ಚರಂಡಿಯಲ್ಲಿ ಎಸೆಯುತ್ತಿರುವುದರಿಂದ ಚರಂಡಿ ತುಂಬಾ ಪೇಪರ್ ಲೋಟಗಳು ರಾರಾಜಿಸುತ್ತಿವೆ. ಇದಕ್ಕೆ ಸ್ಥಳೀಯ ಗ್ರಾಪಂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಿಡಿಒ ಎಚ್.ಎಂ.ರಾಜೇಶ್ ಮಾತನಾಡಿ, ದೊಡ್ಡನಕಟ್ಟೆ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು.ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾ ಗುವುದು ಎಂದರು. ಗಾಂಧಿ ನಗರದಲ್ಲಿ ಚರಂಡಿ ವ್ಯವಸ್ಥೆಯಿಲ್ಲ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಗ್ರಾಪಂ ಅಧ್ಯಕ್ಷ ಪಿ.ಎಸ್.ಸಂತೋಷ್ ಪ್ರತಿಕ್ರಿಯಿಸಿ, ಗಾಂಧಿ ನಗರದಲ್ಲಿ ಚರಂಡಿ ಇದೆ.ಆದರೆ ಚರಂಡಿ ನೀರು ಮುಂದಕ್ಕೆ ಹರಿದು ಹೋಗಲು ಜಾಗವಿಲ್ಲ. ಈ ಸಂಭಂದ ಶಾಸಕರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು ಸಮಸ್ಯೆ ಬಗೆಹರಿಯಲಿದೆ ಎಂದರು. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕಮಲಾ ಮಾತನಾಡಿ, ಬಿ.ವಡ್ಡರಹಟ್ಟಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಪಿಎಸ್‌ಐ ಶಾಹಿದ್ ಅಫ್ರಿದಿ ಉತ್ತರಿಸಿ, ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ 5 ಪ್ರಕರಣಗಳು ಬಿಟ್ಟೇನಹಳ್ಳಿ ವಡ್ಡರಹಟ್ಟಿಗೆ ಸಂಭಂಧಿಸಿವೆ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಅಕ್ರಮ ಮದ್ಯ ಮಾರಾಟ ಮಾಡುವವರ ಗಡಿಪಾರಿಗೆ ಶಿಫಾರಸ್ಸು ಮಾಡಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ಪಿ.ಎಸ್.ಸಂತೋಷ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೀಲಾ ರವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಮಹಾಂತೇಶ್ ಭಜಂತ್ರಿ, ಮಕ್ಕಳ ಕಲ್ಯಾಣ ಸಮಿತಿ ಜಯಶೀಲಾ ಕಲ್ಯಾಣ್, ಬಿಇಒ ತಿಮ್ಮಯ್ಯ,ಸಿಡಿಪಿಒ ಶಿವಪ್ರಕಾಶ್, ಸಿಎಂಸಿಎ ಸಂಯೋಜಕ ಪಿ.ಆರ್.ಮರುಳಪ್ಪ, ಪಿಡಿಒ ಎಚ್.ಎಂ.ರಾಜೇಶ್,ಸ್ನೇಹ ಸಂಸ್ಥೆ ಕಾರ್ಯದರ್ಶಿ ಸಿಕೆಒ ರಾಘವೇಂದ್ರ, ಎಸ್.ಡಿಎಂಸಿ ಅಧ್ಯಕ್ಷ ಪಿ.ಎಂ.ಜಯಸ್ವಾಮಿ,ರವಿ,ಸೋಮಶೇಖರ್, ಗ್ರಾಪಂ ಸದಸ್ಯರು ಇದ್ದರು. --- ಬಾಕ್ಸ್ ಸುದ್ದಿಗೆ-- ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ವಿಪರ್ಯಾಸ. ಇಂತಹ ಪ್ರಕರಣಗಳು ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕಾದುದು ನಮ್ಮೆಲ್ಲರ ಕರ್ತವ್ಯ

- ಜಯಶೀಲಾ ಕಲ್ಯಾಣ್,

ಅಧ್ಯಕ್ಷೆ ಮಕ್ಕಳ ಕಲ್ಯಾಣ ಸಮಿತಿ ಚಿಕ್ಕಮಗಳೂರು.-- ಬಾಕ್ಸ್ ಸುದ್ದಿ-- ಮಕ್ಕಳ ಗ್ರಾಮ ಸಭೆಯಲ್ಲಿ ಮಾತ್ರ ಮಕ್ಕಳು ಪ್ರಶ್ನಿಸಬೇಕೆಂದಿಲ್ಲ.ದಿನದ 24 ಗಂಟೆಯೂ ಮಕ್ಕಳ ಸಹಾಯವಾಣಿ 1098 ಕೆಲಸ ಮಾಡುತ್ತದೆ. ಸಮಸ್ಯೆ ಎದುರಾದಾಗ ಮಕ್ಕಳು ಸಹಾಯವಾಣಿ ಕರೆ ಮಾಡಬಹುದು.

- ಮಹಾಂತೇಶ್ ಭಜಂತ್ರಿ, ಅಧ್ಯಕ್ಷ ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿಕ್ಕಮಗಳೂರು.

17ಕೆಕೆಡಿಯು1.

ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉದ್ಘಾಟಿಸಿದರು.

17ಕೆಕೆಡಿಯು1ಎ.

ಪಂಚನಹಳ್ಳಿ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ಮಕ್ಕಳು.