ಮಕ್ಕಳು ಗುರಿಯತ್ತ ಗಮನಹರಿಸಿ: ಬಿಇಒ ರಾಮಪ್ಪ

| Published : Jan 15 2024, 01:48 AM IST

ಸಾರಾಂಶ

ಕನಕಪುರ: ಗುರಿ ಮುಟ್ಟುವ ತನಕ ನಿಲ್ಲದಿರಿ, ಏಳಿ ಎದ್ದೇಳಿ ಎಂಬ ಸ್ವಾಮಿ ವಿವೇಕಾನಂದರ ಘೋಷ ವಾಕ್ಯಕ್ಕೆ ವಿದ್ಯಾರ್ಥಿಗಳು ಬದ್ಧರಾದರೆ ತಮ್ಮ ಗುರಿ ಮುಟ್ಟಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ರಾಮಪ್ಪ ತಿಳಿಸಿದರು.

ಕನಕಪುರ: ಗುರಿ ಮುಟ್ಟುವ ತನಕ ನಿಲ್ಲದಿರಿ, ಏಳಿ ಎದ್ದೇಳಿ ಎಂಬ ಸ್ವಾಮಿ ವಿವೇಕಾನಂದರ ಘೋಷ ವಾಕ್ಯಕ್ಕೆ ವಿದ್ಯಾರ್ಥಿಗಳು ಬದ್ಧರಾದರೆ ತಮ್ಮ ಗುರಿ ಮುಟ್ಟಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ರಾಮಪ್ಪ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಶಿವನಹಳ್ಳಿ ಗ್ರಾಪಂ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಇಲ್ಲಿನ ಜನಪ್ರತಿನಿಧಿಗಳು ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಮಕ್ಕಳು ಒಂದು ಗುರಿ ಇಟ್ಟುಕೊಂಡು ಆ ಗುರಿ ಮುಟ್ಟುವ ಕಡೆಗೆ ನಿಮ್ಮ ಗಮನ ಕೊಟ್ಟರೆ ಖಂಡಿತವಾಗಿ ನಿಮ್ಮ ಕನಸು ನನಸಾಗುತ್ತದೆ ಎಂದರು.

ಪಿಡಿಒ ಕೃಷ್ಣಮೂರ್ತಿ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಶೇ.೫೦ರಷ್ಟು ಅನುದಾನವನ್ನು ಶಾಲೆಗಳ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಬಳಸಿದ್ದೇವೆ. ಎಲ್ಲ ಸರ್ಕಾರಿ ಶಾಲೆಗಳಿಗೆ ಮಕ್ಕಳ ವಯೋಮಾನಕ್ಕೆ ತಕ್ಕಂತೆ ಕ್ರೀಡಾ ಪರಿಕರಗಳನ್ನು ಒದಗಿಸಿಕೊಟ್ಟಿದ್ದೇವೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಮಾದರಿ ಗ್ರಂಥಾಲಯವಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. ಪ್ರಗತಿ ನಿರಂತರ. ಶಾಲೆ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಏನಾದರೂ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಅಧ್ಯಕ್ಷರು ಹಾಗೂ ಸಂಬಂಧಪಟ್ಟವರ ಗಮನಕ್ಕೆ ತಂದು ಬಗೆಹರಿಸುತ್ತೇವೆ ಎಂದರು.

ಬಸವರಾಜು ಮಾತನಾಡಿ, ವಿಶ್ವ ಸಂಸ್ಥೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆ ಮಾಡಲು ಮಕ್ಕಳ ಹಕ್ಕುಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕು ಈ ನಾಲ್ಕು ಹಕ್ಕುಗಳನ್ನು ಕೊಟ್ಟಿದೆ. ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ, ಇದೊಂದು ಸಾಮಾಜಿಕ ಪಿಡುಗು ಇದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಮಕ್ಕಳನ್ನು ಬಾಲ್ಯ ವಿವಾಹ ಮಾಡುವುದಾಗಲಿ ದುಡಿಸಿಕೊಳ್ಳುವುದಾಗಲಿ ಅಂತಹ ಪ್ರಕರಣಗಳು ಕಂಡುಬಂದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ತಡೆಗಟ್ಟಬೇಕು. ಮಕ್ಕಳ ಹಕ್ಕುಗಳನ್ನು ನಾವೆಲ್ಲರೂ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಹನುಮಂತ ನಾಯಕ್, ಉಪಾಧ್ಯಕ್ಷೆ ರತ್ನಾಬಾಯಿ, ಮಾಜಿ ಅಧ್ಯಕ್ಷರಾದ ರಾಜೇಶ್ವರಿ, ಚಿಕ್ಕ ತಾಯಮ್ಮ, ಸದಸ್ಯರಾದ ವಿನೋದ್, ಪ್ರಕಾಶ್, ಅಣ್ಣನಾಯಕ್, ಶ್ರೀನಿವಾಸ್, ಕವಿತಾ, ಸರೋಜಾ ಬಾಯಿ, ಗೌರಿ ಬಾಯಿ, ಸುಶೀಲಾ ಬಾಯಿ, ಶಿವನಹಳ್ಳಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ನಾರಾಯಣ್, ಗ್ರಾಪಂ ಕಾರ್ಯದರ್ಶಿ ಪುಟ್ಟಸ್ವಾಮಿ ಇತರರಿದ್ದರು.ಪೊಟೊ೧೩ಸಿಪಿಟಿ೨:

ಶಿವನಹಳ್ಳಿ ಗ್ರಾಪಂ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ರಾಮಪ್ಪ, ಪಿಡಿಒ ಕೃಷ್ಣಮೂರ್ತಿ, ಅಧ್ಯಕ್ಷ ಹನುಮಂತ ನಾಯಕ್, ಉಪಾಧ್ಯಕ್ಷೆ ರತ್ನಾಬಾಯಿ ಉಪಸ್ಥಿತರಿದ್ದರು.