ಸಾರಾಂಶ
ಡಿಸಿಎಂಸಿ ಪ್ರೌಢ ಶಾಲೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿ ಮಕ್ಕಳು ಪೋಷಕರು ಹಾಗೂ ಶಿಕ್ಷಕರ ನಡವಳಿಕೆ ಗಮನಿಸಿ ಅನುಕರಣೆ ಮಾಡುತ್ತಾರೆ ಎಂದು ಬೆಂಗಳೂರಿನ ಪೀಣ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶೃತಿ ತಲನೇರಿ ತಿಳಿಸಿದರು.
ಗುರುವಾರ ಸಂಜೆ ಪಟ್ಟಣದ ದೇವಾಲೆಕೊಪ್ಪ ಚಿನ್ನಯ್ಯ ಗೌಡ ಸ್ಮಾರಕ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ವಾರ್ಷಿಕೋ ತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪೋಷಕರು, ಶಿಕ್ಷಕರು ತಮ್ಮ ದೈನಂದಿನ ಜೀವನದಲ್ಲೂ ನಿಸ್ವಾರ್ಥ, ಪ್ರಾಮಾಣಿಕತೆಯಿಂದ ಬದುಕಬೇಕು. ಇದು ಮಕ್ಕಳಿಗೆ ಪ್ರತಿನಿತ್ಯದ ಪಾಠ ಆಗಲಿದೆ. ದಿನದ ಸ್ವಲ್ಪ ಸಮಯ ವಾದರೂ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಬೇಕು. ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರೆ ಅದನ್ನು ಗಮನಿಸಿ ಸರಿಯಾದ ತಿಳುವಳಿಕೆ ನೀಡಬೇಕು. ಯಾವುದೇ ಕಾರ್ಯ ಸಂಘಟಿತರಾಗಿ, ಸಹಕಾರ ಮನೋಭಾವದಿಂದ ಮಾಡಿದರೆ ಯಶಸ್ಸು ಸಿಗಲಿದೆ ಎಂಬುದಕ್ಕೆ ಈ ಡಿಸಿಎಂಸಿ ಶಾಲೆ ಉದಾಹರಣೆ ನಿಲ್ಲುತ್ತದೆ.ಇಲ್ಲಿ ದಾನಿಗಳು ನಿಸ್ವಾರ್ಥದಿಂದ ತಮ್ಮ ಕೊಡುಗೆ ನೀಡಿದ್ದರಿಂದ ಈ ಶಾಲೆಯು ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ ಎಂದರು.ರೋಟರಿ ಸಂಸ್ಥೆ ನಿಕಟಪೂರ್ವ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಉದ್ಘಾಟಿಸಿ ಮಾತನಾಡಿ, ಎಲ್ಲಾ ದಾನಕ್ಕಿಂತ ವಿದ್ಯಾ ದಾನ ಅತಿ ಶ್ರೇಷ್ಠ. ಕಳೆದ 35 ವರ್ಷಗ ಹಿಂದೆ ಪ್ರಾರಂಭಗೊಂಡ ಡಿಸಿಎಂಸಿ ಶಾಲೆ ಈಗ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೋಷಕರು, ಆಡಳಿತ ಮಂಡಳಿ,ದಾನಿಗಳು ಹಾಗೂ ಶಿಕ್ಷಕರು ವಿದ್ಯಾಸಂಸ್ಥೆಗೆ ಆಧಾರ ಸ್ಥಂಭವಾಗಿದ್ದಾರೆ. ಎಲ್ಲರೂ ಒಟ್ಟಾಗಿ ಸಮನ್ವಯತೆಯಿಂದ ಕೆಲಸ ಮಾಡಿದರೆ ವಿದ್ಯಾ ಸಂಸ್ಥೆ ಬೆಳವಣಿಗೆ ಹೊಂದಲಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಭರಾಟೆಯಲ್ಲಿ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ಮಕ್ಕಳ ಪಿಯು ಶಿಕ್ಷಣ ಮುಗಿಸುವವರೆಗಾದರೂ ಪೋಷಕರು ಮಕ್ಕಳ ಹತ್ತಿರ ಇದ್ದು ಅವರ ಭಾವನೆಗಳಿಗೆ ಸ್ಪಂದಿಸುತ್ತಿರಬೇಕು. ಮಕ್ಕಳಿಗೆ ಯಾವ ವಿಚಾರದಲ್ಲಿ ಆಸಕ್ತಿ ಇದೆ ಎಂಬುದನ್ನು ಗಮನಿಸಿ ಅವರು ಪ್ರತಿಭೆಗಳಿಗೆ ನೀರೆರೆದು ಪೋಷಣೆ ಮಾಡಿದರೆ ಮುಂದಿನ ಜೀವನದಲ್ಲಿ ಮಕ್ಕಳು ಸಾಧನೆ ಮಾಡಲು ಅನುಕೂಲವಾಗುತ್ತದೆ.ನಮ್ಮ ಡಿಸಿಎಂಸಿ ಸಂಸ್ಥೆಯಲ್ಲಿ ಎಲ್.ಕೆ.ಜಿಯಿಂದ ಪಿಯುಸಿ ವರೆಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಎಲ್ಲಾ ಸೌಲಭ್ಯ ನೀಡುತ್ತಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ನ ನಿಕಟಪೂರ್ವ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ದೆಯಲ್ಲಿ ವಿಜೇತರಾದ ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳಿಗೆ ಬಹುಮಾನ ವಿತರಣೆ,ಪ್ರತಿಭಾ ಪುರಸ್ಕಾರ,ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ನಗದು ಬಹುಮಾನ, ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಮೂವರು ವಿದ್ಯಾರ್ಥಿನಿಯರಿಗೆ ನಗದು ಬಹುಮಾನ,ರಾಜ್ಯ ಮಟ್ಟದಲ್ಲಿ ಕರಾಟೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ಕೆ.ವೆಂಕಟೇಶ್ ಬಹುಮಾನ ವಿತರಿಸಿದರು.ಅತಿಥಿಗಳಾಗಿ ಡಿಸಿಎಂಸಿ ಪ್ರೌಢ ಶಾಲೆ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಶೈಕ್ಷಣಿಕ ಸಲಹೆಗಾರ ಬಿ.ಕೆ.ಉದಯಕರ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್, ಭದ್ರಾ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ, ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ, ತಾ.ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ಶೈಕ್ಷಣಿಕ ಸಂಯೋಜಕಿ ತೃಪ್ತಿ ಅಮರ್, ತಾ.ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಲ್.ಎಂ.ಸತೀಶ್,ಖಜಾಂಚಿ ಎಸ್.ಎನ್.ಲೋಕೇಶ್,ಶಾರದಾ ಬೋರ್ಡಿಂಗ್ ಕಾರ್ಯದರ್ಶಿ ಚೈತ್ರಾ ರಮೇಶ್, ಎಚ್.ಡಿ.ವಿನಯ್,ಪ್ರಾಂಶುಪಾಲೆ ಪದ್ಮ ರಮೇಶ್ ಮತ್ತಿತರರು ಇದ್ದರು.