ಯಾದಗಿರಿಯಲ್ಲಿ ಮಕ್ಕಳಿಗೆ ಉಸಿರಾಡಲೂ ಆಗ್ತಿಲ್ಲ, ಕ್ರಮ ಕೈಗೊಳ್ಳಿ!

| Published : Apr 16 2025, 12:37 AM IST

ಯಾದಗಿರಿಯಲ್ಲಿ ಮಕ್ಕಳಿಗೆ ಉಸಿರಾಡಲೂ ಆಗ್ತಿಲ್ಲ, ಕ್ರಮ ಕೈಗೊಳ್ಳಿ!
Share this Article
  • FB
  • TW
  • Linkdin
  • Email

ಸಾರಾಂಶ

‘ರಾಸಾಯನಿಕ ಹಾಗೂ ವೈದ್ಯಕೀಯ ಸಂಬಂಧಿ ಕಾರ್ಖಾನೆಗಳು ಹೊರಬಿಡುತ್ತಿರುವ ವಿಷಪೂರಿತ ಅನಿಲದಿಂದಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಉಸಿರಾಡಲು ತೊಂದರೆ ಆಗ್ತಿದೆ.. ದಯವಿಟ್ಟು, ಈ ಬಗ್ಗೆ ಕ್ರಮ ಕೈಗೊಳ್ಳಿ... "

ವಿಷಪೂರಿತ ಗಾಳಿಯಿಂದ ನೂರಾರು ವಿದ್ಯಾರ್ಥಿ, ಸಿಬ್ಬಂದಿಗೆ ಉಸಿರಾಟ ತೊಂದರೆ । ಪ್ರಾಂಶುಪಾಲರಿಂದ ಶಾಸಕರಿಗೆ ಪತ್ರ

ಆನಂದ್ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

‘ರಾಸಾಯನಿಕ ಹಾಗೂ ವೈದ್ಯಕೀಯ ಸಂಬಂಧಿ ಕಾರ್ಖಾನೆಗಳು ಹೊರಬಿಡುತ್ತಿರುವ ವಿಷಪೂರಿತ ಅನಿಲದಿಂದಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಉಸಿರಾಡಲು ತೊಂದರೆ ಆಗ್ತಿದೆ.. ದಯವಿಟ್ಟು, ಈ ಬಗ್ಗೆ ಕ್ರಮ ಕೈಗೊಳ್ಳಿ... "

ಜಿಟಿಸಿಸಿ (ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ) ಕೇಂದ್ರ ಸರ್ಕಾರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಇದೇ ಫೆ.17 ರಂದು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರಿಗೆ ಬರೆದಿದ್ದ ಇಂತಹುದ್ದೊಂದು ಪತ್ರ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಹದಗೆಟ್ಟ ಚಿತ್ರಣಕ್ಕೆ ಸರ್ಕಾರಿ ಅಧಿಕಾರಿಯೊಬ್ಬರ ನೇರ ಸಾಕ್ಷಿಯಂತಿತ್ತು. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಪೂರಿತ ಅನಿಲ ಬಿಡುಗಡೆಯಾಗುತ್ತಿರುವ ಮಾಹಿತಿ ನೀಡುವ ಕುರಿತು ಪ್ರಾಂಶುಪಾಲ ಕಾಂಬ್ಳೆ ಶಾಸಕ ಕಂದಕೂರ ಅವರಿಗೆ ಪತ್ರ ಬರೆದಿದ್ದರು.

ಶಾಸಕರಿಗೆ ಬರೆದ ಪತ್ರದಲ್ಲೇನಿದೆ?:

‘ಯಾದಗಿರಿ ನಗರದಿಂದ 45 ಕಿ.ಮೀ. ದೂರದಲ್ಲಿರುವ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರದ ಸುತ್ತಲೂ ರಾಸಾಯನಿಕ ಹಾಗೂ ವೈದ್ಯಕೀಯಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.

ಆದರೆ, ಕಳೆದ ಎರಡ್ಮೂರು ತಿಂಗಳಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳು ವಿಪರೀತ ವಿಷಪೂರಿತ ಅನಿಲ ಬಿಡುಗಡೆ ಮಾಡುತ್ತಿರವುದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಉಸಿರಾಟದ ತೊಂದರೆಯಾಗುತ್ತಿದೆ.

ಇದರಿಂದ, ಕೆಲವು ವಿದ್ಯಾರ್ಥಿಗಳ ಪಾಲಕರು ದೂರವಾಣಿ ಮೂಲಕ ಹಾಗೂ ಖುದ್ದಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಇತ್ತೀಚೆಗೆ ನಡೆದ ವೃತ್ತಿ ಮಾರ್ಗದರ್ಶನ, ತಾಂತ್ರಿಕ ಕೌಶಲ್ಯ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ತಾಲೂಕಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ವಿಷಪೂರಿತ ಅನಿಲ ಬಗ್ಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಜೊತೆ ಚರ್ಚಿಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿಗೆ ಈ ಒಂದು ಅಂಶ ಕೂಡ ಕಾರಣವಾಗಬಹುದು. ಆದ್ದರಿಂದ, ನಮ್ಮ ಕೇಂದ್ರದ ಸುತ್ತಲೂ ವಿಷಪೂರಿತ ಅನಿಲ ಬಿಡುಗಡೆಯಾಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ವಿಷಪೂರಿತ ಅನಿಲ ಬಿಡುಗಡೆ ಮಾಡದಂತೆ ಕ್ರಮ ವಹಿಸಲು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ...’ ಎಂಬುದಾಗಿ ಪ್ರಾಂಶುಪಾಲರು ಪತ್ರದಲ್ಲಿ ಗಂಭೀರತೆಯ ಬಗ್ಗೆ ಆತಂಕ ಹೊರಹಾಕಿದ್ದರು. ಬಾಕ್ಸ್...

ಅನಿವಾರ್ಯತೆಯ ಬದುಕು-ಶಿಕ್ಷಣ

‘ಕನ್ನಡಪ್ರಭ’ ಜಿಟಿಸಿಸಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಕೆಮಿಕಲ್‌- ತ್ಯಾಜ್ಯದ ಘಾಟು ಎಲ್ಲೆ ಮೀರಿದಂತಿತ್ತು. ಒಂದಿಷ್ಟು ಮಕ್ಕಳು-ಸಿಬ್ಬಂದಿ ಮೂಗು-ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ಇಂತಹ ವಾತಾವರಣವನ್ನು ರೂಢಿಸಿಕೊಂಡವರಂತೆ ಓಡಾಡುತ್ತಿದ್ದುದು ಕಂಡುಬಂತು.

ಪಾಠ ಹೇಳುವಾಗ ಶಿಕ್ಷಕರ, ಕೇಳುವಾಗ ಮಕ್ಕಳ ದುಸ್ಥಿತಿ ಆ ದೇವರೇ ಬಲ್ಲ! ಶಿಕ್ಷಣ ಹಾಗೂ ಮುಂದೆ ಉದ್ಯೋಗ ಸಿಗುವ ಭರವಸೆಯಿಂದಾಗಿ ಅಲ್ಲಿ ಶಿಕ್ಷಣ ಕಲಿಯಲು ಯಾದಗಿರಿ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಬಂದಿರುವ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು, ಅನಿವಾರ್ಯದ ಬದುಕು ಸಾಗಿಸಿದಂತಿತ್ತು.

ಪ್ರಾಂಶುಪಾಲರ ಪತ್ರದ ಕುರಿತು ವಿಧಾನಸಭೆ ಅಧಿವೇಶನದಲ್ಲೂ ಶಾಸಕ ಕಂದಕೂರ ಪ್ರಸ್ತಾಪಿಸಿ ಅಲ್ಲಿನ ದುಸ್ಥಿತಿ ವಿವರಿಸಿದ್ದರು. ಸರ್ಕಾರದ ವಿರುದ್ಧ ಹರಿಹಾಯ್ದಿದ್ದರಿಂದ ಮಜುಗರಕ್ಕೊಳಗಾದ ಸರ್ಕಾರ ಪ್ರಾಂಶುಪಾಲರ ಪತ್ರ ಗಂಭೀರತೆಯ ಬಗ್ಗೆ ತಕ್ಷಣಕ್ಕೆ ಕ್ರಮ ಕೈಗೊಳ್ಳುವ ಬದಲು, ಸತ್ಯ ಹೇಳಿ ಪತ್ರ ಬರೆದಿದಕ್ಕೆ ಪ್ರಾಂಶುಪಾಲರತ್ತಲೇ ಕೆಂಗಣ್ಣು ಬೀರಿತ್ತು ಎನ್ನಲಾಗಿದೆ.

‘ಕನ್ನಡಪ್ರಭ’ ಕೆಲವರ ಮಾತಿಗೆಳೆದಾಗ, ಹದಗೆಟ್ಟ ಪರಿಸರದ ಬಗ್ಗೆ ಹೆಚ್ಚಿನ ಮಾತನಾಡುವಂತಿಲ್ಲ ಎಂಬ ಅಘೋಷಿತ ಫರ್ಮಾನನ್ನು ಅಲ್ಲಿ ಹೊರಡಿಸಿದ್ದರಿಂದಲೇನೋ, ವಿದ್ಯಾರ್ಥಿಗಳ ಮೊಗದಲ್ಲಿನ ಮೌನವೇ ಅಲ್ಲಿ ಮಾತಾಡುತ್ತಿರುವಂತಿತ್ತು.

ವಿಷಗಾಳಿಯಿಂದ ಇಲ್ಲಾಗುತ್ತಿರುವ ಹಾನಿ, ಜನ- ಜೀವದ ಜೊತೆಗಿನ ಕಂಪನಿಗಳ ಚೆಲ್ಲಾಟದ ಬಗ್ಗೆ ಸದನದಲ್ಲಿ ಚರ್ಚಿಸಿದ್ದೇನೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ನಾನೇ ಮುಂದಾಗಿ ಬಂದ್‌ ಮಾಡಿಸುವ ಎಚ್ಚರಿಕೆ ನೀಡಿದ್ದೇನೆ.

ಶರಣಗೌಡ ಕಂದಕೂರ, ಶಾಸಕ, ಗುರುಮಠಕಲ್‌ ಕ್ಷೇತ್ರ.