ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಿ: ಡಾ.ವಿಶಾಲ್ ಕುಮಾರ್

| Published : Mar 04 2024, 01:18 AM IST

ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಿ: ಡಾ.ವಿಶಾಲ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ

ಕನ್ನಡಪ್ರಭ ವಾರ್ತೆ ಮಡಿಕೇರಿರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಂ. ಸತೀಶ್ ಕುಮಾರ್ ಅವರು‌ ಭಾನುವಾರ ಚಾಲನೆ ನೀಡಿದರು.

ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಲಸಿಕಾ ವಿಭಾಗದಲ್ಲಿ (ಜಿಲ್ಲಾಸ್ಪತ್ರೆ) ಶಿಶುವಿಗೆ ಪೋಲಿಯೋ ಹನಿ ನೀಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಕ್ಕಳಿಗೆ ವಿಕಲತೆ ತಪ್ಪಿಸುವಲ್ಲಿ 1995 ರಿಂದ ಪೋಲಿಯೋ ಹನಿ ನೀಡುತ್ತಾ ಬರಲಾಗಿದೆ. ಆ ನಿಟ್ಟಿನಲ್ಲಿ ಎಲ್ಲರು ಸಕರಿಸುವಂತೆ ಮನವಿ ಮಾಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ವಿಶಾಲ್ ಕುಮಾರ್ ಅವರು ಮಾತನಾಡಿ, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ ಎಂದು ಕೋರಿದರು. ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಂಜುಂಡಯ್ಯ ಅವರು ಮಾತನಾಡಿ, ಭಾರತವು ಈಗಾಗಲೇ ಪೋಲಿಯೊ ಮುಕ್ತವಾಗಿದೆ. ಆದರೂ ಹತ್ತಿರದ ರಾಷ್ಟ್ರಗಳಲ್ಲಿ ಪೋಲಿಯೋ ಕಾಣಿಕೊಂಡಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಐದು ವರ್ಷದೊಳಗಿನ ಮಗುವಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆನಂದ್ ಅವರು ಮಾತನಾಡಿ ರಾಷ್ಟ್ರದಲ್ಲಿ 1995 ರಿಂದ ಪೋಲಿಯೋ ಹನಿ ನೀಡುತ್ತ ಬರಲಾಗಿದೆ. ಆರಂಭದಲ್ಲಿ 3 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುತ್ತಿತ್ತು. ಬಳಿಕ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪೋಲಿಯೋ ಹನಿ ಕೊಡಿಸುವುದರಿಂದ ಮಕ್ಕಳಿಗೆ ಅಂಗವಿಕಲತೆ ಬರುವುದಿಲ್ಲ. ಆದ್ದರಿಂದ ಕಡ್ಡಾಯವಾಗಿ ಪೋಲಿಯೋ ಹನಿ ಕೊಡಿಸಬೇಕು. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಡಾ.ಆನಂದ್ ಅವರು ಪ್ರತಿಪಾದಿಸಿದರು. ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಕೊಡಿಸಿದ್ದರೂ ಸಹ, ಐದು ವರ್ಷದೊಳಗಿನ ಮಗುವಿಗೆ ಪೋಲಿಯೋ ಹನಿ ಹಾಕಿಸಬೇಕು. ತಪ್ಪು ಅಭಿಪ್ರಾಯಗಳಿಗೆ ಕಿವಿಗೊಡಬಾರದು. ಐದು ವರ್ಷದೊಳಗಿನ ಮಗು ಪೋಲಿಯೋ ಹನಿಯಿಂದ ವಂಚಿತವಾಗದಂತೆ ಗಮನಹರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅವರು ನುಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಮಾತನಾಡಿ, ಈಗಾಗಲೇ ರಾಷ್ಟ್ರದಲ್ಲಿ ಪೋಲಿಯೋ ಮುಕ್ತವಾಗಿದ್ದರೂ ಸಹ ನೆರೆ ರಾಷ್ಟ್ರಗಳಲ್ಲಿ 12 ಮಂದಿಗೆ ಪೋಲಿಯೊ ಕಾಣಿಕೊಂಡಿರುವುದರಿಂದ ರಾಷ್ಟ್ರದಲ್ಲಿ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ ಎಂದರು.

ಪೋಲಿಯೋ ಹನಿ ಕೊಡಿಸುವುದು ಪೋಲಿಯೋ ವೈರಸ್ ತಡೆಯಲು ಅತ್ಯಂತ ಸುರಕ್ಷಿತವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ರಾಮಚಂದ್ರ ಕಾಮತ್ ಅವರು ಮನವಿ ಮಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ರವೀಂದ್ರ ರೈ ಅವರು ಮಾತನಾಡಿ, ಪೋಲಿಯೋ ಮುಕ್ತ ಮಾಡುವಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಸದಾ ಕೈಜೋಡಿಸಿದ್ದು, ಒಳ್ಳೆಯ ಸಮಾಜ ನಿರ್ಮಿಸುವಲ್ಲಿ ಎಲ್ಲರೂ ಕೈಜೋಡಿಸಿ ಎಂದರು. ಜಿಲ್ಲಾ ಆಯೂಷ್ ಅಧಿಕಾರಿ ಡಾ. ರೇಣುಕಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ ಅವರು ಮಾತನಾಡಿದರು. ಆರ್ ಸಿಎಚ್ ಅಧಿಕಾರಿ ಡಾ.ಮಧುಸೂದನ, ತಾಲೂಕು ವೈದ್ಯಾಧಿಕಾರಿ ಡಾ.ಚೇತನ್, ಅರವಳಿಕೆ ತಜ್ಞರಾದ ಡಾ.ಧನಂಜಯ ಮೇದಪ್ಪ, ಡಾ. ಸಲ್ಮಾ, ಡಾ.ಹರ್ಷ, ಶ್ರೀನಾಥ್, ಶ್ರೀನಿವಾಸ್, ಪಾಲಕ್ಷ, ಭವಾನಿ, ದೇಚಮ್ಮ, ದೇವರಾಜು, ಇತರರು ಇದ್ದರು.