ಮಕ್ಕಳಿಗೆ ಶಿಕ್ಷಣ ಜೊತೆ ವ್ಯವಹಾರಿಕ ಜ್ಞಾನ ಅಗತ್ಯ: ಎ.ಆರ್.ರಘು ಅಭಿಪ್ರಾಯ

| Published : Jan 24 2025, 12:48 AM IST

ಸಾರಾಂಶ

ಮನೆಯಿಂದ ಪೋಷಕರ ಬಳಿ ಮಕ್ಕಳು ಬೋಂಡಾ, ವಡೆ, ಚಕ್ಕುಲಿ, ನಿಪ್ಪಟ್ಟಿನಂತಹ ವಿವಿಧ ತಿಂಡಿ ತಿನಿಸು ಮಾಡಿಸಿಕೊಂಡು ಆಗಮಿಸಿದ್ದರು. ಕೋಸು, ಬದನೆ, ತೆಂಗಿನಕಾಯಿ, ಪಪ್ಪಾಯಿ, ಕೊತ್ತಂಬರಿ, ವಿವಿಧ ತರಕಾರಿ, ಸೊಪ್ಪುಗಳನ್ನು ತಂದಿದ್ದರು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದೆಡೆ ಜೋಡಿಸಿ ವ್ಯಾಪಾರಕ್ಕೆ ಇಳಿದರು.

ಕನ್ನಡಪ್ರಭ ವಾರ್ಚೆ ಕೆ.ಆರ್.ಪೇಟೆ

ಮಕ್ಕಳಿಗೆ ಶಿಕ್ಷಣ ಜೊತೆ ವ್ಯವಹಾರಿಕ ಜ್ಞಾನ ರೂಪಿಸಿಕೊಳ್ಳಲು ಸಂತೆಯಂತಹ ವೇದಿಕೆ ಅನುಕೂಲವಾಗಲಿದೆ ಎಂದು ಸಮಾಜ ಸೇವಕ ಎ.ಆರ್.ರಘು ತಿಳಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳಾಂಗಣ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಾಲೆ, ಸರ್ಕಾರಿ ಶಾಲೆಗಳು ಉಳಿಯಲು ಇಂತಹ ಹಲವು ಕಾರ್ಯಕ್ರಮ ಶಿಕ್ಷಕರು ರೂಪಿಸಬೇಕಿದೆ ಎಂದರು.

ಮಕ್ಕಳಿಗೆ ಕೇವಲ ಪಠ್ಯ ಸಾಕು ಎನ್ನದೆ ಪಠ್ಯೇತರ ಚಟುವಟಿಕೆಗಳಿಗೆ ಗಮನವಿರಲಿ. ಖುಷಿಯಿಂದ ಮಕ್ಕಳು ಶಾಲೆಗೆ ಬರಲು ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಮುಂದಾಗಬೇಕು ಎಂದರು.

ಮನೆಯಿಂದ ಪೋಷಕರ ಬಳಿ ಮಕ್ಕಳು ಬೋಂಡಾ, ವಡೆ, ಚಕ್ಕುಲಿ, ನಿಪ್ಪಟ್ಟಿನಂತಹ ವಿವಿಧ ತಿಂಡಿ ತಿನಿಸು ಮಾಡಿಸಿಕೊಂಡು ಆಗಮಿಸಿದ್ದರು. ಕೋಸು, ಬದನೆ, ತೆಂಗಿನಕಾಯಿ, ಪಪ್ಪಾಯಿ, ಕೊತ್ತಂಬರಿ, ವಿವಿಧ ತರಕಾರಿ, ಸೊಪ್ಪುಗಳನ್ನು ತಂದಿದ್ದರು. ಎಲ್ಲವನ್ನು ಅಚ್ಚುಕಟ್ಟಾಗಿ ಒಂದೆಡೆ ಜೋಡಿಸಿ ವ್ಯಾಪಾರಕ್ಕೆ ಇಳಿದರು. ವ್ಯಾಪಾರಿಗಳನ್ನು ಮೀರಿಸುವಂತೆ ಕೂಗಿಕೊಂಡು ತಮ್ಮದೆ ಆದ ಶೈಲಿಯಲ್ಲಿ ವ್ಯಾಪಾರದಲ್ಲಿ ಮಗ್ನರಾದರು.

ಗ್ರಾಹಕ ಪೋಷಕ, ಗ್ರಾಮಸ್ಥರೊಂದಿಗೆ ಚೌಕಾಸಿ ವ್ಯಾಪಾರಕ್ಕೆ ಇಳಿದು ವ್ಯಾಪಾರ ಕೌಶಲತೆ ಮೆರೆದರು. ತೂಕದ ಯಂತ್ರದಲ್ಲಿ ಕರಾರುವಕ್ಕಾಗಿ ಮಾರಾಟ ವಸ್ತುಗಳನ್ನು ತೂಗಿದರು. ಒಂದಕ್ಕೆ ಒಂದು ಉಚಿತ ಎಂದು ಹಲವರು ಗಿರಾಕಿ ಸೆಳೆಯಲು ವ್ಯಾಪಾರ ತಂತ್ರವನ್ನು ಬಳಸಿದರು.

ಮನೆಯಿಂದಲೇ ಬಟ್ಟೆ ಬ್ಯಾಗ್ ತರಬೇಕು ಎನ್ನುವುದು ತಿಳಿಯುವುದಿಲ್ಲವೇ, ಪ್ಲಾಸ್ಟಿಕ್ ಹಾನಿಕಾರಕ. ಪರಿಸರ ಸ್ನೇಹಿಯಾಗಿ ಬದುಕಲು ಮುಂದಾಗಬೇಕು ಎಂದು ಪ್ರಶ್ನಿಸಿದರು. ಕೆಲವು ಗಂಟೆ ನಡೆದ ಮಿನಿ ವ್ಯಾಪಾರ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳನ್ನು ಮಕ್ಕಳು ಮಾರಾಟ ಮಾಡಿ ಖುಷಿಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಎ.ಜೆ.ಕುಮಾರ್, ಮುಖ್ಯ ಶಿಕ್ಷಕರಾದ ರವಿ, ನಾರಾಯಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಸೈಯದ್ ಉಮರ್, ಉಪಾಧ್ಯಕ್ಷೆ ಲೋಲಾಕ್ಷಿ, ಜೆಡಿಎಸ್ ತಾಲೂಕು ಘಟಕದ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಜಮೀರ್ ಅಹ್ಮದ್, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಶಿಕ್ಷಕರಾದ ಪ್ರವೀಣ್, ಮಂಜುಳಾ, ಕುಮಾರಿ, ಕುಮಾರ್ ಸೇರಿದಂತೆ ಅನೇಕ ಪೋಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು.