ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ಅಗತ್ಯ: ನ್ಯಾ.ಯೋಗೇಶ್

| Published : Oct 29 2024, 12:53 AM IST

ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ಅಗತ್ಯ: ನ್ಯಾ.ಯೋಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷಯ ಮತ್ತು ಕುಷ್ಠ ರೋಗಕ್ಕಿಂತಲೂ ಮಾರಕವಾದ ಭ್ರಷ್ಟಾಚಾರ ದೇಶದ ಜನರನ್ನು ಕಾಡುತ್ತಿದೆ. ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ತಲುಪಿಸಲು ಭ್ರಷ್ಟಾಚಾರ ತಡೆಯಾಗಿದೆ. ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಹಾಗೂ ನೈತಿಕಮೌಲ್ಯ ಕಲಿಸಿದರೆ ದೇಶಕ್ಕೆ ಮಾರಕವಾಗಿರುವ ಭ್ರಷ್ಟಾಚಾರವನ್ನು ಸಂಪೂರ್ಣ ತಡೆಗಟ್ಟಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಯ ಮತ್ತು ಕುಷ್ಠ ರೋಗಕ್ಕಿಂತಲೂ ಮಾರಕವಾದ ಭ್ರಷ್ಟಾಚಾರ ದೇಶದ ಜನರನ್ನು ಕಾಡುತ್ತಿದೆ. ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ತಲುಪಿಸಲು ಭ್ರಷ್ಟಾಚಾರ ತಡೆಯಾಗಿದೆ. ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಒಂದು ರಾಜ್ಯ ಅಥವಾ ದೇಶಕ್ಕೆ ಸೀಮಿತಿವಾಗಿಲ್ಲ. ಇಡೀ ವಿಶ್ವವನ್ನು ಆವರಿಸಿದೆ. ಭ್ರಷ್ಟಚಾರದ ರ್‍ಯಾಂಕಿಂಗ್‌ನಲ್ಲಿ ಭಾರತ 93 ನೇ ಸ್ಥಾನ ಪಡೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆಯಲ್ಲಿ ಜನರು ಪ್ರಾಮಾಣಿಕತೆಯಿಂದ ಮತ ಚಲಾಯಿಸಿದಾಗ ಮೇಲ್ಮಟ್ಟದಲ್ಲಿ ಹಂತ ಹಂತವಾಗಿ ಪ್ರಾಮಾಣಿಕತೆ ನಿರೀಕ್ಷೆ ಮಾಡಬಹುದು. ಹೀಗಾಗಿ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದರು.

ದೇಶದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಅದೆಷ್ಟೋ ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಆದರೆ, ಕೆಲ ಸರ್ಕಾರಿ ನೌಕರರು ಕೈತುಂಬಾ ಸಂಬಳ ಸಿಕ್ಕರೂ ಸಹ ಲಂಚ ಕೊಡದಿದ್ದರೆ ಏನೂ ಆಗುವುದಿಲ್ಲ ಎನ್ನುವ ರೀತಿಯಲ್ಲಿ ಕೆಟ್ಟ ವ್ಯವಸ್ಥೆ ತಂದಿಟ್ಟಿದ್ದಾರೆ. ತಮ್ಮ ಕೆಲಸಗಳಿಗೆ ಲಂಚದ ರೂಪದಲ್ಲಿ ಹಣ ಕೊಡುವುದು ಮತ್ತು ಪಡೆಯುವುದು ಎರಡೂ ಕೂಡ ಅಪರಾಧ ಎಂದರು.

ದೇಶದಲ್ಲಿ ಅಸಂಘಟಿತ ಕಾರ್ಮಿಕರು, ಕೂಲಿಕಾರರು, ರೈತರು ಹಾಗೂ ಸಮಾಜದಲ್ಲಿ ಅನ್ಯಾಯಕ್ಕೊಳಗಾದ ಪ್ರತಿಯೊಬ್ಬರನ್ನೂ ಕೂಡ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಸರ್ಕಾರಗಳು ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದೆ.

ಭ್ರಷ್ಟಾಚಾರದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂದು ವಿಷಾದಿಸಿದರು.

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ವಿಷಯ ಕುರಿತು ವಕೀಲ ಕೆ.ಎಚ್.ಮಹದೇವ್ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಮಹದೇವ, ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್.ಶ್ರೀದೇವಿ, ಅಪರ ಸರ್ಕಾರಿ ವಕೀಲ ಪಿ.ಸಿ. ಮಂಜುನಾಥ್ ಮಾತನಾಡಿದರು. ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಸುಭಾಷ್ ಎಂ.ಆಲದಹಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ವಿದ್ಯುತ್ ಕೆಲಸದ ಪರಿಕರಗಳ ಕಿಟ್ ವಿತರಿಸಲಾಯಿತು.

ತಾಲೂಕು ಕಾರ್ಮಿಕ ನಿರೀಕ್ಷಕ ಎನ್.ಟಿ.ಶಿವಕುಮಾರ್, ನ್ಯಾಯಾಂಗ ಇಲಾಖೆಯ ಸೋನುಮೂರ್ತಿ, ರಮೇಶ್ ಸೇರಿದಂತೆ ಹಲವರು ಇದ್ದರು.